ಕಾಸರಗೋಡು: ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ರಾಜ್ಯಾದ್ಯಂತ ಹೋಟೆಲ್, ಕ್ಯಾಂಟೀನ್ ಮುಚ್ಚುಗಡೆಯತ್ತ ಸಾಗುತ್ತಿದ್ದು, ಸಮಸ್ಯೆ ಗಂಭೀರ ಸ್ವರೂಪ ತಾಳುತ್ತಿದ್ದು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಸರಗೋಡು ಜಿಲ್ಲಾ ಹೋಟೆಲ್ ಮಾಲಕರ ಅಸೋಸಿಯೇಷನ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ವಾಣಿಜ್ಯ ಸಿಲಿಂಡರ್ ವಿತರಣೆ ರದ್ದುಗೊಂಡ ಹಿನ್ನೆಲೆಯಲ್ಲಿ ಖಾಸಗಿ ಇಂಧನ ಪೂರೈಕೆಯ ಸಿಲಿಂಡರ್ ಬಳಸಬಹುದೆಂಬ ಸರ್ಕಾರಿ ಆದೇಶವಿದ್ದರೂ, ಖಾಸಗಿ ಇಂಧನ ಸಂಸ್ಥೆಯವರು ಅತಿಯಾದ ಬೆಲೆ ಏರಿಕೆಯೊಂದಿಗೆ ಕಾಳಸಂತೆ ವ್ಯಾಪಾರಕ್ಕಿಳಿದಿದ್ದಾರೆ. ಇದರಿಂದಾಗಿ ರಾಜ್ಯ ವ್ಯಾಪಕ ಹೋಟೆಲ್ ಮುಚ್ಚುಗಡೆ ಭೀತಿಯಲ್ಲಿದೆ. ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಹೋಟೆಲ್ ಮಾಲಕರ ಅಸೋಸಿಯೇಷನ್ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿ, ಸಿಎಂ ನಿಲುವಿನ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್‍ಗೆ 1950 ರೂ. ಇದ್ದ ಬೆಲೆ ಈಗ ಖಾಸಗಿ ಖರೀದಿಯಲ್ಲಿ ಅದರ ದುಪ್ಪಟ್ಟಾಗಿದೆ. ಇದರಿಂದ ಹೋಟೆಲ್ ಉದ್ದಿಮೆ ಮುನ್ನಡೆಸುವುದು ದುಸ್ತರವಾಗಿದೆ. ಹೋಟೆಲ್ ರೆಸ್ಟಾರೆಂಟ್‍ಗಳಿಗೆ ವಾಣಿಜ್ಯ ದರದಲ್ಲಿ ಇಂಧನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೋಟೇಲ್ ರೆಸ್ಟಾರೆಂಟ್ ಅಸೋಸಿಯೇಷನ್ ರಾಜ್ಯ ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ ಕಾಸರಗೋಡು ಹೇಳಿಕೆಯಲ್ಲಿ ತಿಳಿಸಿದ್ದಾರೆ.

