ಲಖನೌ: ವಾರಾಣಸಿಯ ಗಂಗಾ ನದಿಯಲ್ಲಿ ದೋಣಿಯೊಂದರ ಮೇಲೆ 'ಇಫ್ತಾರ್' ಕೂಟ ನಡೆಸಿದ್ದು, ನದಿಯಲ್ಲಿಯೇ ಮಾಂಸದ ಮೂಳೆಗಳನ್ನು ಎಸೆದ ಆರೋಪದ ಮೇರೆಗೆ 14 ಮುಸ್ಲಿಂ ಯುವಕರನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸಿಜೆಎಂ ಅಮಿತ್ ಕುಮಾರ್ ಯಾದವ್ ಅವರು ನಿನ್ನೆ (ಗುರುವಾರ 19) ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಬಳಿಕ ಎಲ್ಲಾ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎಂದು ಆದೇಶ ನೀಡಿದ್ದಾರೆ.
ದೋಣಿಯಲ್ಲಿ ಮಾಂಸಾಹಾರ ಸೇವಿಸಿ, ಮೂಳೆಗಳನ್ನು ನದಿಯಲ್ಲಿ ಎಸೆದ ಕುರಿತ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾದ ಬೆನ್ನಲ್ಲೇ ಬಿಜೆಪಿ ನಗರ ಘಟಕದ ಅಧ್ಯಕ್ಷ ರಜತ್ ಜೈಸ್ವಾಲ್ ದೂರು ದಾಖಲಿಸಿದ್ದರು. ಆ ಕೂಡಲೇ ಪೊಲೀಸರು 14 ಯುವಕರನ್ನು ಬಂಧಿಸಿದ್ದರು. ಅಲ್ಲದೆ ದೋಣಿಯಲ್ಲಿ ಇಫ್ತಾರ್ ಕೂಟ ಆಯೋಜಿಸಲು ಅವಕಾಶ ಮಾಡಿಕೊಟ್ಟ ದೋಣಿಯ ನಾವಿಕನ ವಿರುದ್ಧವೂ ಕ್ರಮ ತೆಗೆದುಕೊಂಡಿದ್ದರು. ದೋಣಿ ಚಾಲಕ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

