ನಾಗ್ಪುರ: ಜಗತ್ತಿನಾದ್ಯಂತ ನಡೆಯುತ್ತಿರುವ ಸಂಘರ್ಷಗಳಿಗೆ ಜನರ ಸ್ವಾರ್ಥ ಹಿತಾಸಕ್ತಿ ಹಾಗೂ ಇತರರ ಮೇಲೆ ಅಧಿಪತ್ಯ ಸಾಧಿಸುವ ಹಂಬಲವೇ ಮೂಲ ಕಾರಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಶುಕ್ರವಾರ ಹೇಳಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇವಲ ಭಾಷಣಗಳಿಂದ ಜಗತ್ತಿನಲ್ಲಿ ಶಾಂತಿ ನೆಲಸುವುದಿಲ್ಲ.
ಏಕತೆ, ಶಿಸ್ತು ಮತ್ತು ಧದ ಅನುಕರಣೆಯಿಂದ ಮಾತ್ರ ಶಾಂತಿ ಬೇರೂರಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.
ಕಳೆದ 2,000 ವರ್ಷಗಳಿಂದಲೂ ಜಗತ್ತು ಸಂಘರ್ಷಗಳನ್ನು ಪರಿಹರಿಸಲು ವಿವಿಧ ವಿಚಾರಧಾರೆಗಳೊಂದಿಗೆ ಪ್ರಯೋಗಗಳನ್ನು ನಡೆಸುತ್ತಲೇ ಬಂದಿದೆ. ಆದರೆ, ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರ ಮತ್ತು ಮೇಲು-ಕೀಳು ಎಂಬ ಭಾವನೆಗಳು ಇಂದಿಗೂ ಜೀವಂತವಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ʼಭಾರತದ ಜನರು ಮಾನವೀಯತೆಯ ಕಾನೂನನ್ನು ಪಾಲಿಸುತ್ತಾರೆ. ಆದರೆ ಉಳಿದ ಜಗತ್ತಿನ ಕೆಲ ರಾಷ್ಟ್ರಗಳು ಬಲಿಷ್ಠನಷ್ಟೇ ಬದುಕಲು ಸಾಧ್ಯ ಎಂಬ ಕಾಡಿನ ನಿಯಮವನ್ನು ಅನುಸರಿಸುತ್ತಿವೆ. ಜಗತ್ತಿಗೆ ಬೇಕಾಗಿರುವುದು ಸಾಮರಸ್ಯ, ಸಂಘರ್ಷವಲ್ಲ ಎಂದು ಭಾಗವತ್ ಪುನರುಚ್ಚರಿಸಿದ್ದಾರೆ.
ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳನ್ನು ಕೊನೆಗಾಣಿಸುವ ಶಕ್ತಿ ಕೇವಲ ಭಾರತಕ್ಕೆ ಮಾತ್ರ ಇದೆ ಎಂಬ ಧ್ವನಿ ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿದೆ. ಏಕೆಂದರೆ ಶಾಂತಿ ಮತ್ತು ಸಾಮರಸ್ಯ ಭಾರತದ ನೈಜ ಸ್ವಭಾವವಾಗಿದೆ ಎಂದು ಅವರು ತಿಳಿಸಿದ್ದಾರೆ
ಧರ್ಮವು ಕೇವಲ ಗ್ರಂಥಗಳಿಗೆ ಸೀಮಿತವಾಗಿರಬಾರದು, ಬದಲಾಗಿ ಅದು ನಮ್ಮ ನಡವಳಿಕೆಯಲ್ಲಿ ಪ್ರತಿಫಲಿಸಬೇಕು. ಸಂಘರ್ಷದಿಂದ ಸಾಮರಸ್ಯದ ಕಡೆಗೆ ಮತ್ತು ಪೈಪೋಟಿಯಿಂದ ಸಹಕಾರದ ಕಡೆಗೆ ಜಗತ್ತು ಬದಲಾಗಬೇಕಿದೆ ಎಂದು ಭಾಗವತ್ ಕರೆ ನೀಡಿದ್ದಾರೆ.

