ಕೋಲ್ಕತ್ತ: ನಗರದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೀಡಾಗಿ, ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ತಾಯಿ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಯಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಟಿಎಂಸಿ ಸರ್ಕಾರವನ್ನು ಕಿತ್ತೊಗೆಯುವ ಸಲುವಾಗಿ ರಾಜಕೀಯದ ಮಾರ್ಗದಲ್ಲಿ ನಡೆಯುವುದಾಗಿ ಗುರುವಾರ ಹೇಳಿಕೊಂಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಶೀಘ್ರದಲ್ಲೇ ಪ್ರಕಟವಾಗಲಿರುವ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಸಾಧ್ಯತೆ ಇದೆ. ತಮ್ಮನ್ನು ಉತ್ತರ 24 ಪರಗಣ ಜಿಲ್ಲೆಯ ಪಣಿಹತಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿಸಬಹುದು ಎಂದಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಬಿಜೆಪಿಯಿಂದ ಈ ಹಿಂದೆಯೇ ಬಂದಿತ್ತು ಎಂದೂ ಹೇಳಿದ್ದಾರೆ.
ʼನನಗೆ ಬಹಳ ಹಿಂದೆಯೇ ಬಿಜೆಪಿ ಆಫರ್ ನೀಡಿತ್ತು. ಆದರೆ, ನಾನು ಆಗ ಮಾನಸಿಕವಾಗಿ ಸಿದ್ಧವಿರಲಿಲ್ಲ. ಆ ಆಹ್ವಾನವನ್ನು ಸ್ವೀಕರಿಸಲು ನಿನ್ನೆಯಷ್ಟೇ ನಿರ್ಧಾರ ಮಾಡಿದ್ದೇನೆ. ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಳ್ವಿಕೆಯನ್ನು ಕೊನೆಗಾಣಿಸುವ ಸಲುವಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೇನೆʼ ಎಂದು ಹೇಳಿದ್ದಾರೆ.
ತಮ್ಮ ಮಗಳ ಪ್ರಕರಣದಲ್ಲಿ ತನಿಖೆ ಹಾಗೂ ನ್ಯಾಯದಾನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ʼಮಗಳಿಗೆ ನ್ಯಾಯ ಕೊಡಿಸುವುದೇ ನಾನು ರಾಜಕೀಯ ಪ್ರವೇಶಿಸುತ್ತಿರುವುದರ ಹಿಂದಿನ ಉದ್ದೇಶʼ ಎಂದೂ ಸ್ಪಷ್ಟಪಡಿಸಿದ್ದಾರೆ.
ಮೃತ ವೈದ್ಯ ವಿದ್ಯಾರ್ಥಿನಿಯ ಪೋಷಕರನ್ನು ಬಿಜೆಪಿ ನಾಯಕ ಅರ್ಜುನ್ ಸಿಂಗ್ ಅವರು ಇತ್ತೀಚೆಗೆ ಭೇಟಿಯಾಗಿ ಮಾತುಕತೆ ನಡೆಸಿದ್ದರು.
31 ವರ್ಷದ ವೈದ್ಯ ವಿದ್ಯಾರ್ಥಿನಿಯ ಮೇಲೆ 2024ರ ಆಗಸ್ಟ್‌ನಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.
ಕೃತ್ಯದ ಹಿಂದೆ ಇರುವವರನ್ನು ಮಮತಾ ಸರ್ಕಾರ ರಕ್ಷಿಸುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ನಿರಂತರವಾಗಿ ಆರೋಪಿಸುತ್ತಾ ಬಂದಿದೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಎರಡು ಹಂತಗಳಲ್ಲಿ (ಏಪ್ರಿಲ್ 23 ಹಾಗೂ ಏಪ್ರಿಲ್ 29) ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

