ತಿರುವನಂತಪುರಂ: 'ಬ್ರಹ್ಮೋಸ್' ಕ್ಷಿಪಣಿ ತಯಾರಿಕಾ ಘಟಕಕ್ಕೆ ಉಚಿತವಾಗಿ 180 ಎಕರೆ ಭೂಮಿಯನ್ನು ನೀಡಲು ಕೇರಳ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಪಿಣರಾಯಿವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
'ಬ್ರಹ್ಮೋಸ್' ಕ್ಷಿಪಣಿ ತಯಾರಿಕಾ ಘಟಕ ಸ್ಥಾಪಿಸಲು ತಿರುವನಂತಪುರ ಜಿಲ್ಲೆಯ ಕಟ್ಟಕಾಡ ತಾಲೂಕಿನ ಕಳ್ಳಿಕ್ಕಾಡ್ ಹಳ್ಳಿಯ 180 ಎಕರೆ ಭೂಮಿಯನ್ನು ನೀಡಲಾಗುತ್ತದೆ. ಈ ಘಟಕದಲ್ಲಿ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಇನ್ನಿತರ ಯುದ್ಧ ಪರಿಕರಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಕೇರಳ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
2022ರಲ್ಲಿ ನಡೆದ 22ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡು ಪದಕಗಳನ್ನು ತಂದುಕೊಟ್ಟಿದ್ದ ಟ್ರೀಸಾ ಜಾಲಿಗೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಟ್ರೀಸಾ ಅವರಿಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯಲ್ಲಿ ಸೂಪರ್‌ನ್ಯೂಮರರಿ ಹುದ್ದೆಯನ್ನು ನೀಡಲು ಸರ್ಕಾರ ಮುಂದಾಗಿದೆ.

