ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಎಡಪಕ್ಷಗಳು 192 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ನಿಕಟಪೂರ್ವ ರಾಜ್ಯಸಭಾ ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ಹಾಗೂ ಸಿಪಿಐ(ಎಂ) ಕೇಂದ್ರೀಯ ಸಮಿತಿ ಸದಸ್ಯೆ ಮೀನಾಕ್ಷಿ ಮುಖರ್ಜಿ ಅವರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಭಟ್ಟಾಚಾರ್ಯ ಅವರು ಕೋಲ್ಕತ್ತ ಹೊರವಲಯದಲ್ಲಿರುವ ಜಾಧವ್‌ಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಪಕ್ಷದ ಯುವ ನಾಯಕಿ ಮುಖರ್ಜಿ ಅವರು ಹೂಗ್ಲಿ ಜಿಲ್ಲೆಯ ಉತ್ತರಪಾರಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಮುಖರ್ಜಿ ಅವರು ನಂದಿಗ್ರಾಮ್ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಿಜೆಪಿಯ ಸುವೇಂದು ಅಧಿಕಾರಿ ಗೆಲುವು ಪಡೆದರೆ, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಎರಡನೇ ಸ್ಥಾನ ಪಡೆದಿದ್ದರು.
ಕಾಳಿಗಂಜ್ ಕ್ಷೇತ್ರದಿಂದ ಶಬೀನಾ ಯಾಸ್ಮೀನ್ ಅವರನ್ನು ಕಣಕ್ಕಿಳಿಸಿದೆ. ಕಳೆದ ವರ್ಷ ಜೂನ್‌ನಲ್ಲಿ ಈ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಟಿಎಂಸಿ ಪಕ್ಷ ಜಯಗಳಿಸಿತ್ತು. ನಂತರ ನಡೆದ ವಿಜಯೋತ್ಸವ ರ‍್ಯಾಲಿ ವೇಳೆ ಎಸೆದ ಕಚ್ಚಾಬಾಂಬ್ ಸ್ಫೋಟದಿಂದ ಯಾಸ್ಮೀನ್ ಅವರ 6 ವರ್ಷದ ಮಗಳು ತಮನ್ನಾ ಮೃತಪಟ್ಟಿದ್ದಳು.
'ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮೂರರಿಂದ ನಾಲ್ಕು ದಿನದಲ್ಲಿ ಅಂತಿಮಗೊಳಿಸಲಾಗುವುದು' ಎಂದು ಎಡಪಕ್ಷಗಳ ಮುಖ್ಯಸ್ಥ ಬಿಮನ್ ಬೋಸ್ ತಿಳಿಸಿದ್ದಾರೆ.

