ಮನಾಮ: ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದಿಂದ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಬಹರೈನ್ ಮತ್ತು ಸೌದಿ ಅರೇಬಿಯದಲ್ಲಿ ನಡೆಯಬೇಕಾಗಿದ್ದ ಫಾರ್ಮುಲಾ ವನ್ ರೇಸ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಮೋಟರ್‌ಸ್ಪೋರ್ಟ್‌ನ ಆಡಳಿತ ಮಂಡಳಿ ಎಫ್‌ಐಎ ಶನಿವಾರ ಘೋಷಿಸಿದೆ.
''ಮಧ್ಯಪ್ರಾಚ್ಯ ವಲಯದಲ್ಲಿ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ಎಪ್ರಿಲ್‌ನಲ್ಲಿ ನಡೆಯಬೇಕಾಗಿದ್ದ ಬಹರೈನ್ ಮತ್ತು ಸೌದಿ ಗ್ರ್ಯಾನ್ ಪ್ರಿ ಪಂದ್ಯಾವಳಿಗಳನ್ನು ರದ್ದುಗೊಳಿಸಲು ಇಂದು ನಿರ್ಧರಿಸಲಾಗಿದೆ'' ಎಂದು ಅಂತರ್‌ರಾಷ್ಟ್ರೀಯ ಆಟೊಮೊಬೈಲ್ ಫೆಡರೇಶನ್ (ಎಫ್‌ಐಎ) ಹೇಳಿಕೆಯೊಂದರಲ್ಲಿ ತಿಳಿಸಿದೆ.
''ಹಲವಾರು ಪರ್ಯಾಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತಾದರೂ, ಈ ಎಪ್ರಿಲ್‌ನಲ್ಲಿ ಯಾವುದೇ ಪರ್ಯಾಯ ಕ್ರಮಗಳನ್ನು ಕೈಗೊಳ್ಳದಿರಲು ಅಂತಿಮವಾಗಿ ನಿರ್ಧರಿಸಲಾಯಿತು. ಫಾರ್ಮುಲಾ ವನ್ ಗ್ರೂಪ್, ಸ್ಥಳೀಯ ಪ್ರಾಯೋಜಕರು ಮತ್ತು ವಲಯದಲ್ಲಿರುವ ನಮ್ಮ ಸದಸ್ಯ ಕ್ಲಬ್‌ಗಳೊಂದಿಗೆ ಸುದೀರ್ಘ ಸಮಾಲೋಚನೆಗಳನ್ನು ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು'' ಎಂದು ಎಫ್‌ಐಎ ಹೇಳಿದೆ.
ಈ ಋತುವಿನ ನಾಲ್ಕನೇ ಗ್ರ್ಯಾನ್ ಪ್ರಿ ಬಹರೈನ್‌ನಲ್ಲಿ ಎಪ್ರಿಲ್ 10ರಿಂದ 12ರವರೆಗೆ ನಡೆಯಬೇಕಾಗಿತ್ತು. ಒಂದು ವಾರದ ಬಳಿಕ ಸೌದಿ ಗ್ರ್ಯಾನ್ ಪ್ರಿ ನಡೆಯಬೇಕಾಗಿತ್ತು

