ಹಮೀರ್‌ಪುರ: 2027ಕ್ಕೆ ನಾಲ್ಕು ವರ್ಷಗಳ ಅವಧಿ ಪೂರೈಸುವ 'ಅಗ್ನಿವೀರ'ರಿಗೆ ಪುನರ್ ಅವಕಾಶ ಕಲ್ಪಿಸಲು ಶೇ 20ರಷ್ಟು ಉದ್ಯೋಗ ಮೀಸಲಿಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪತ್ರ ಬರೆದಿದ್ದಾರೆ.
ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ರವಾನೆ ಮಾಡಲಾಗಿದೆ ಎಂದು ಸೈನಿಕ ಕಲ್ಯಾಣ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ಮದನ್ ಶೀಲ್ ಶರ್ಮಾ ತಿಳಿಸಿದ್ದಾರೆ.
ಶೇ 20ರಷ್ಟು ಉದ್ಯೋಗಗಳನ್ನು ಅರಣ್ಯ ರಕ್ಷಕರು, ಗಣಿ ರಕ್ಷಣಾ ಪಡೆ, ಪೊಲೀಸ್ ಕಾನ್‌ಸ್ಟೆಬಲ್, ಅಗ್ನಿಶಾಮಕ ಸಿಬ್ಬಂದಿ, ಅಶ್ವಾರೋಹಿ ದಳ, ಜೈಲು ವಾರ್ಡನ್, ವಿಶೇಷ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳಲ್ಲಿ ಮೀಸಲಿಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಹರಿಯಾಣ ರಾಜ್ಯವು ಅಗ್ನಿವೀರರಿಗೆ ಸಮವಸ್ತ್ರಧಾರಿ ಪಡೆಗಳಲ್ಲಿ ಮೀಸಲು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎನಿಸಿಕೊಂಡಿದೆ. ಉತ್ತರಾಖಂಡ್ ಕೂಡ ಅಗ್ನಿವೀರರಿಗೆ ಮೀಸಲು ಘೋಷಣೆ ಮಾಡಿದೆ.

