ಅಮರಾವತಿ: ಭಯೋತ್ಪಾದನೆಯ ನಂಟು ಹೊಂದಿರುವ ಶಂಕೆಯಡಿ ಕರ್ನಾಟಕದ ಯುವಕ ಸೇರಿದಂತೆ ವಿವಿಧ ರಾಜ್ಯಗಳ 12 ಮಂದಿಯನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
'ಶಂಕಿತರನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಬಿಹಾರ, ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ರಾಜಸ್ಥಾನಗಳಲ್ಲಿ ವಿಶೇಷ ತಂಡಗಳನ್ನು ನಿಯೋಜಿಸಲಾಗಿತ್ತು' ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
'ಬಂಧಿತರಲ್ಲಿ ಮೂವರು ಆಂಧ್ರಪ್ರದೇಶದ ವಿಜಯವಾಡದವರು. ಈ ಮೂವರು ಉಗ್ರಗಾಮಿ ಸಿದ್ಧಾಂತಗಳನ್ನು ಪ್ರಚುರಪಡಿಸುತ್ತಿದ್ದರು ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು. ಯುವಕರನ್ನು ಪ‍್ರೇರೆಪಿಸಲು, ಜಿಹಾದ್ ಚಟುವಟಿಕೆಗಳಿಗೆ ಕೈಗೊಳ್ಳಲು ಮತ್ತು ತಮ್ಮ ಜಾಲವನ್ನು ದೇಶಾದ್ಯಂತ ವಿಸ್ತರಿಸಲು ಅವರು 'ಅಲ್ ಮಲಿಕ್ ಇಸ್ಲಾಮಿಕ್ ಯೂತ್' ಎಂಬ ಹೆಸರಿನಲ್ಲಿ ತಂಡವನ್ನು ಕಟ್ಟಿಕೊಂಡಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.
'ಮೂವರು ಅಲ್ ಕೈದಾ ಮತ್ತು ಐಎಸ್ ಸಂಘಟನೆಗಳಿಗೆ ಸಂಬಂಧಿಸಿದ ವಿದೇಶಿ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. 'ಘಜ್ವಾ-ಇ-ಹಿಂದ್'(ಭಾರತದ ವಿರುದ್ಧದ ಯುದ್ಧ) ಎನ್ನುವ ಕಲ್ಪನೆಯೊಂದಿಗೆ ಅವರು ಕೆಲಸ ಮಾಡುತ್ತಿದ್ದರು' ಎಂದು ತಿಳಿಸಿದ್ದಾರೆ.
ಬೈಕ್ ಟ್ಯಾಕ್ಸಿ ಚಾಲಕನಾಗಿರುವ ಮೊಹಮ್ಮದ್ ರಹಮತುಲ್ಲಾ ಷರೀಫ್ ಅಂತರರಾಷ್ಟ್ರೀಯ ಭಯೋತ್ಪಾದಕ ನಾಯಕರ ದ್ವೇಷ ಭಾಷಣದಿಂದ ಪ್ರೇರಿತನಾಗಿದ್ದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಉಗ್ರಗಾಮಿ ಸಿದ್ಧಾಂತಗಳನ್ನು ಬೆಂಬಲಿಸುತ್ತಿದ್ದ ಮತ್ತು ಪ್ರಚುರಪಡಿಸುತ್ತಿದ್ದ. ಲೇಸರ್ ಮಾರ್ಕಿಂಗ್ ಕಾರ್ಮಿಕನಾಗಿದ್ದ ಸೋಹೈಲ್ ಬೇಗ್ ಕೂಡಾ ಇದೇ ರೀತಿಯ ಕೃತ್ಯಗಳನ್ನು ನಡೆಸುತ್ತಿದ್ದ ಎಂಬುವುದು ತನಿಖೆಯಲ್ಲಿ ಪತ್ತೆಯಾಗಿದೆ.
ರಹಮತುಲ್ಲಾ ಸಾಮಾಜಿಕ ಜಾಲತಾಣದ ಮೂಲಕ ವಿದೇಶಿ ವ್ಯಕ್ತಿ ಅಲ್-ಹಕೀಮ್ ಶುಕೂರ್ ಜೊತೆ ಸಂಪರ್ಕ ಸಾಧಿಸಿದ್ದ. ಅತನ ನಿರ್ದೇಶನದಂತೆ ಬಿಹಾರದ ಶದ್‌ಮನ್ ದಿಲ್‌ಕುಶ್ ಮತ್ತು ಹೈದರಾಬಾದ್‌ನ ಸೈದಾ ಬೇಗಂ ಪರಿಚಯಮಾಡಿಕೊಂಡಿದ್ದ.
ಬಳಿಕ ತನ್ನ ಜಾಲವನ್ನು ವಿಸ್ತರಿಸಿದ ರಹಮತುಲ್ಲಾ ಐಎಸ್‌ಗೆ ಸಂಬಂಧಿಸಿದ 'ಬೆನೆಕ್ಸ್ ಕಾಂ' ಸಂಘಟನೆಯ ನಂಟು ಹೊಂದಿದ್ದ ಅಜ್ಮನುಲ್ಲಾ ಖಾನ್ (ಬಿಹಾರ), ಲಕ್ಕಿ ಅಹಮದ್ (ದೆಹಲಿ), ಮಿರ್ ಆಸೀಫ್ ಅಲಿ (ಪಶ್ಚಿಮ ಬಂಗಾಳ), ಝಿಶಾನ್ (ರಾಜಸ್ಥಾನ), ಅಬ್ದುಲ್ ಸಲಾಂ (ಕರ್ನಾಟಕ), ಶಾರುಕ್ ಖಾನ್ ಮತ್ತು ಶಿಯಾಕ್ ಪಿಯಾಝ್ ಉರ್ ರೆಹಮನ್ (ಮಹಾರಾಷ್ಟ್ರ) ಅವರ ಜತೆ ಸಂಪರ್ಕ ಸಾಧಿಸಿದ್ದ.
ಆರೋಪಗಳೇನು?
* ಸಾಮಾಜಿಕ ಜಾಲತಾಣದಲ್ಲಿ ಉಗ್ರಗಾಮಿ ಸಿದ್ಧಾಂತ ಪ್ರಚಾರ
* 'ಅಲ್ ಮಲಿಕ್ ಇಸ್ಲಾಮಿಕ್ ಯೂತ್' ಎಂಬ ಹೆಸರಿನ ಗುಂಪು ರಚನೆ
* 'ಘಜ್ವಾ-ಇ-ಹಿಂದ್'(ಭಾರತದ ವಿರುದ್ಧದ ಯುದ್ಧ) ಎಂಬ ಧ್ಯೇಯದಡಿ ಕೃತ್ಯ
ತರಬೇತಿಗೆ ಪಾಕ್‌ಗೆ ತೆರಳಲು ಸಿದ್ಧತೆ
'ಮೂವರು ಶಂಕಿತರು ಒಂದು ತಿಂಗಳೊಳಗೆ ಪಾಕಿಸ್ತಾನಕ್ಕೆ ತೆರಳಿ ತರಬೇತಿಯಲ್ಲಿ ಪಾಲ್ಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಹಾಗೂ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ತರಬೇತಿ ಪಡೆಯುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.
'ಮೂವರು ತಮ್ಮನ್ನು ಮುಜಾಹಿದ್ಧೀನ್‌ಗಳು ಎಂದು ಬಿಂಬಿಸಿಕೊಳ್ಳುವ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಒಸಮಾ ಬಿನ್ ಲಾಡೆನ್ ವಿಡಿಯೊಗಳನ್ನು ನೋಡಿ ಆತನನ್ನು ಆರೋಪಿಗಳು ಅನುಕರಿಸುತ್ತಿದ್ದರು' ಎಂದು ಪೊಲೀಸರು ಹೇಳಿದ್ದಾರೆ.
'ಆನ್‌ಲೈನ್ ಪೋಸ್ಟ್‌ಗಳಲ್ಲಿ ರಾಷ್ಟ್ರಧ್ವಜದ ಬದಲಿಗೆ ಐಎಸ್ ಧ್ವಜವನ್ನು ಹಾಕಿದ್ದಾರೆ ರಾಷ್ಟ್ರಗೀತೆಯನ್ನು ಅಣಕಿಸಿದ್ದಾರೆ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ್ದಾರೆ ಐಎಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಅದರ ವಿರುದ್ಧ ಇರುವವರ ಬಗ್ಗೆ ದ್ವೇಷ ಹರಡಿದ್ದಾರೆ. ಭಾರತವನ್ನು ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ' ಎಂದು ವಿವರಿಸಿದ್ದಾರೆ.

