ನವದೆಹಲಿ: ಪ್ರಾದೇಶಿಕ ವಿಮಾನ ಸಂಪರ್ಕವನ್ನು ಬಲಪಡಿಸುವ ಸಲುವಾಗಿ 'ಪರಿಷ್ಕೃತ ಉಡಾನ್ ಯೋಜನೆ'ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ನಾಲ್ಕು ಕೋಟಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಒಟ್ಟು ₹28,840 ಕೋಟಿ ವೆಚ್ಚದಲ್ಲಿ 2026-27ನೇ ಹಣಕಾಸು ವರ್ಷದಿಂದ 2035-36ರವರೆಗೆ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಯೋಜನೆಯಡಿ, ಪ್ರಾದೇಶಿಕ ಸಂಪರ್ಕ ಹೆಚ್ಚಿಸಲು ಪ್ರಸ್ತುತ ಬಳಕೆಯಲ್ಲಿಲ್ಲದ 100 ಏರ್ ಸ್ಟ್ರಿಪ್‌ಗಳನ್ನು ವಿಮಾನ ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಮುಂದಿನ ಎಂಟು ವರ್ಷಗಳಲ್ಲಿ ₹12,159 ಕೋಟಿ ವೆಚ್ಚ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕೇವಲ ಪ್ರಾದೇಶಿಕ ಸಂಪರ್ಕ ಯೋಜನೆ ಅಡಿಯಲ್ಲಿ ಬರುವ ವಿಮಾನ ನಿಲ್ದಾಣಗಳಿಗೆ ಅಧಿಕ ನಿರ್ವಹಣಾ ವೆಚ್ಚ ತಗಲುತ್ತಿದೆ. ಆದರೆ, ಈ ನಿಲ್ದಾಣಗಳಿಗೆ ಸೀಮಿತ ಆದಾಯ ಇದೆ. ಹೀಗಾಗಿ ಈ ಯೋಜನೆಯಡಿ ವಿಮಾನ ನಿಲ್ಡಾಣಗಳಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ ಬೆಂಬಲ ನೀಡಲಾಗುತ್ತದೆ. ಪ್ರತಿ ವಿಮಾನ ನಿಲ್ದಾಣಕ್ಕೆ ವರ್ಷಕ್ಕೆ ಗರಿಷ್ಠ ₹3.06 ಕೋಟಿ ಮತ್ತು ಪ್ರತಿ ಹೆಲಿಪೋರ್ಟ್/ವಾಟರ್ ಏರೋಡ್ರೋಮ್‌ಗೆ ವರ್ಷಕ್ಕೆ ₹90 ಲಕ್ಷದಂತೆ ಮೂರು ವರ್ಷ ನೆರವು ನೀಡಲಾಗುತ್ತದೆ. 441 ನಿಲ್ದಾಣಗಳಿಗಾಗಿ ₹2,577 ಕೋಟಿ ಮೀಸಲಿಡಲಾಗಿದೆ ಎಂದರು.
ಗುಡ್ಡಗಾಡು, ದೂರದ ಪ್ರದೇಶಗಳು, ದ್ವೀಪಗಳು ಮತ್ತು ಅಭಿವೃದ್ಧಿ ಆಕಾಂಕ್ಷಿ ಜಿಲ್ಲೆಗಳಲ್ಲಿ ತಲಾ ₹15 ಕೋಟಿ ವೆಚ್ಚದಲ್ಲಿ 200 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಎಂಟು ವರ್ಷಗಳಲ್ಲಿ ₹3,661 ಕೋಟಿ ವೆಚ್ಚ ಮಾಡಲಾಗುವುದು ಎಂದು ಅವರು ತಿಳಿಸಿದರು.
ವಿಮಾನಯಾನ ಸಂಸ್ಥೆಗಳು ನಿಗದಿತ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್) ನೀಡಲಾಗುವುದು. ಮುಂದಿನ 10 ವರ್ಷಗಳಲ್ಲಿ ವಿಮಾನಯಾನ ಸಂಸ್ಥೆಗಳಿಗೆ ₹10,043 ಕೋಟಿ ನಿಧಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ವಿವರ ನೀಡಿದರು.
ದೂರದ ಮತ್ತು ದುರ್ಗಮ ಭೂಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಸಣ್ಣ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಕೊರತೆ ನೀಗಿಸಲು ಪವನ್ ಹನ್ಸ್ ಸಂಸ್ಥೆಗೆ ಎರಡು 'ಎಚ್‌ಎಎಲ್ ಧ್ರುವ' ಹೆಲಿಕಾಪ್ಟರ್‌ಗಳನ್ನು ಮತ್ತು ಅಲಯನ್ಸ್ ಏರ್ ಸಂಸ್ಥೆಗೆ ಎರಡು 'ಎಚ್‌ಎಎಲ್ ಡಾರ್ನಿಯರ್' ವಿಮಾನಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ.
ಐವಿಎಫ್‌ಆರ್‌ಟಿ ಮುಂದುವರಿಕೆ:
ವಲಸೆ, ವೀಸಾ, ವಿದೇಶಿಯರ ನೋಂದಣಿ ಮತ್ತು ಟ್ರ್ಯಾಕಿಂಗ್ (ಐವಿಎಫ್‌ಆರ್‌ಟಿ) ಯೋಜನೆಯನ್ನು 2031ರ ಮಾರ್ಚ್ ಅಂತ್ಯದ ವರೆಗೆ ಮುಂದುವರಿಸಲು ಸಂಪುಟ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ₹1,800 ಕೋಟಿ ಮೀಸಲಿಡಲಾಗಿದೆ ಎಂದರು.

