ಜಗದಲ್‌ಪುರ: ಛತ್ತೀಸಗಢದ ಬಸ್ತಾರ್ ಜಿಲ್ಲೆಯಲ್ಲಿ ₹3.95 ಕೋಟಿ ಇನಾಮು ಘೋಷಣೆಯಾಗಿದ್ದ ಒಟ್ಟು 108 ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನಕ್ಸಲರ ಅಡಗುತಾಣಗಳಿಂದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದರ ಜೊತೆಗೆ ₹3.61 ಕೋಟಿ ನಗದು ಮತ್ತು ಸುಮಾರು ₹1.64 ಕೋಟಿ ಮೌಲ್ಯದ ಒಂದು ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಇದು ದೇಶದಲ್ಲಿ ನಕ್ಸಲ್ ನಿಗ್ರಹ ಚಟುವಟಿಕೆಗಳಲ್ಲಿ ಒಂದೇ ಸ್ಥಳದಿಂದ ವಶಪಡಿಸಿಕೊಳ್ಳಲಾಗದ ಗರಿಷ್ಠ ಪ್ರಮಾಣದ ನಗದು ಹಾಗೂ ಬೆಲೆಬಾಳುವ ವಸ್ತುಗಳಾಗಿವೆ ಎಂದು ಬಸ್ತಾರ್ ವಲಯದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶರಣಾದ ನಕ್ಸಲರ ಪೈಕಿ ಆರು ಮಂದಿ ವಿಭಾಗೀಯ ಕಮಾಂಡರ್‌ಗಳಾಗಿದ್ದು, ಅವರ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಕೆ-47, ಇನ್ಸಾಸ್, ಎಸ್‌ಎಲ್‌ಆರ್ ರೈಫಲ್, ಲೈಟ್ ಮೆಷಿನ್ ಗನ್, ರೈಫಲ್, ಬ್ಯಾರೆಲ್ ಗ್ರೆನೇಡ್ ಲಾಂಚರ್ ಸೇರಿದಂತೆ 101 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಿಜಾಪುರದಲ್ಲಿ 37, ದಂತೇವಾಡದಲ್ಲಿ 30, ಸುಕ್ಮಾದಲ್ಲಿ 18, ಬಸ್ತಾರ್‌ನಲ್ಲಿ 16, ನಾರಾಯಣಪುರದಲ್ಲಿ 4, ಕಾಂಕೇರ್‌ನಲ್ಲಿ ಮೂವರು ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಪೊಲೀಸರ ಮುಂದೆ ಶರಣಾಗಿದ್ದಾರೆ. ಇವರೆಲ್ಲ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಸದಸ್ಯರಾಗಿದ್ದರು.
ದೇಶದಲ್ಲಿ ನಕ್ಸಲ್ ನಿಗ್ರಹಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, 2026ರ ಮಾರ್ಚ್ 31ರ ಗಡುವು ನೀಡಿದ್ದಾರೆ.

