6ನೇ ಪರಿಚ್ಛೇದ ಅಡಿಯಲ್ಲಿ ರಾಜ್ಯ ಸ್ಥಾನಮಾನ ಮತ್ತು ರಕ್ಷಣೆಯನ್ನು ಕೋರಿ ಲಡಾಖ್ ನಲ್ಲಿ ನಡೆದ ಚಳುವಳಿಯ ಸಂದರ್ಭದಲ್ಲಿ ಪರಿಸರ ಹೋರಾಟಗಾರ ಸೋನಮ್ ವಾಂಗ್ ಚುಕ್ ಬಂಧನಕ್ಕೊಳಗಾಗಿದ್ದರು. ಸುಮಾರು ಆರು ತಿಂಗಳ ನಂತರ, ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ವಾಂಗ್ ಚುಕ್ ಅವರ ಬಂಧನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಅವರನ್ನು ಮಾರ್ಚ್ 14ರಂದು ಮಧ್ಯಾಹ್ನ 1.30ರ ಸುಮಾರಿಗೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ರತನದಾ ಪೊಲೀಸ್ ಠಾಣೆಯ ಠಾಣಾಧಿಕಾರಿ ದಿನೇಶ್ ಲಖಾವತ್ ತಿಳಿಸಿದ್ದಾರೆ.
ಸೆಪ್ಟೆಂಬರ್ 24ರಂದು ಲಡಾಖ್ ನಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ನಾಲ್ವರು ಸಾವಿಗೀಡಾದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ವಾಂಗ್ ಚುಕ್ ಅವರನ್ನು ಸೆಪ್ಟೆಂಬರ್ 26ರಂದು ಬಂಧಿಸಲಾಗಿತ್ತು.
► ಲಡಾಖ್ ನಲ್ಲಿ ಪ್ರತಿಭಟನೆಗಳಿಗೆ ಕಾರಣವೇನು?
2019ರಲ್ಲಿ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಇಲ್ಲಿ ಹೋರಾಟ ಆರಂಭವಾಯಿತು. 370ನೇ ವಿಧಿಯ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ, ಅದನ್ನು ಎರಡು ವಿಭಿನ್ನ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ತನ್ನದೇ ಆದ ಶಾಸಕಾಂಗವನ್ನು ಉಳಿಸಿಕೊಂಡಿತು. ಆದರೆ ಲಡಾಖ್ ತನ್ನದೇ ಶಾಸಕಾಂಗವಿಲ್ಲದೆ ನೇರ ಕೇಂದ್ರ ಆಳ್ವಿಕೆಗೆ ಒಳಪಟ್ಟಿತು.
ಶಾಸಕಾಂಗದ ಕೊರತೆಯಿಂದಾಗಿ, ಕೇಂದ್ರಾಡಳಿತ ಪ್ರದೇಶದ ಜನರು ನೇರ ಕೇಂದ್ರ ಆಡಳಿತಕ್ಕೆ ಒಳಪಟ್ಟರು. ಜಮ್ಮು ಮತ್ತು ಕಾಶ್ಮೀರದ ನೇಮಕಾತಿ ಮಂಡಳಿಗಳೊಂದಿಗೆ ಸಂಪರ್ಕ ಕಡಿತಗೊಂಡ ನಂತರ, ಸ್ವಾಯತ್ತ ಮಂಡಳಿಗಳ ಗಮನಾರ್ಹ ಅಧಿಕಾರಗಳ ನಷ್ಟ ಮತ್ತು ಉದ್ಯೋಗಗಳ ಕೊರತೆಯನ್ನು ಅವರು ಅನುಭವಿಸಲು ಪ್ರಾರಂಭಿಸಿದರು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಈ ಪ್ರದೇಶದ ನಾಲ್ಕು ಶಾಸಕರು ಇದ್ದರು. ಈಗ ಪ್ರದೇಶದ ಆಡಳಿತ ಸಂಪೂರ್ಣವಾಗಿ ಅಧಿಕಾರಿಗಳ ಕೈಯಲ್ಲಿದೆ. ಲಡಾಖ್ ನವರಿಗೆ ಅಧಿಕಾರದ ಕಚೇರಿಯು ಶ್ರೀನಗರಕ್ಕಿಂತ ದೂರದಲ್ಲಿರುವುದರಿಂದ ಆಡಳಿತಾತ್ಮಕ ಕಷ್ಟಗಳು ಹೆಚ್ಚಾಗಿವೆ.
ಇದಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಬದಲಾದ ನಿವಾಸ ನೀತಿಯು ಲಡಾಖ್ ನಲ್ಲಿ ಭೂಮಿ, ಉದ್ಯೋಗ, ಜನಸಂಖ್ಯಾ ರಚನೆ ಮತ್ತು ಸಾಂಸ್ಕೃತಿಕ ಗುರುತಿನ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ.
►ಲಡಾಖ್ 6ನೇ ಪರಿಚ್ಛೇದದ ಭಾಗವಾಗಲು ಏಕೆ ಬಯಸುತ್ತದೆ?
ಲಡಾಖ್ ನ ಜನಸಂಖ್ಯೆಯ 90% ಕ್ಕಿಂತ ಹೆಚ್ಚು ಜನರು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರುವುದರಿಂದ, ಈ ಪ್ರದೇಶವನ್ನು 6ನೇ ಪರಿಚ್ಛೇದದಡಿ ಸೇರಿಸಬೇಕೆಂಬ ನಿರಂತರ ಬೇಡಿಕೆ ಇದೆ. ವಿಶೇಷವಾಗಿ ಲೇಹ್ ಜಿಲ್ಲೆಯಲ್ಲಿ ಬೌದ್ಧರು ಪ್ರಾಬಲ್ಯ ಹೊಂದಿದ್ದಾರೆ.
ಸಂವಿಧಾನದ 244ನೇ ವಿಧಿಯ ಅಡಿಯಲ್ಲಿ 6ನೇ ಪರಿಚ್ಛೇದವು ಕೆಲವು ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಬಹುಸಂಖ್ಯಾತ ಪ್ರದೇಶಗಳಿಗೆ ಸ್ವಾಯತ್ತ ಜಿಲ್ಲಾ ಮಂಡಳಿಗಳ (ADCs) ಮೂಲಕ ಆಡಳಿತ ನೀಡಲು ಅವಕಾಶ ಮಾಡಿಕೊಡುತ್ತದೆ.
ಈ ಮಂಡಳಿಗಳು ಐದು ವರ್ಷದ ಅವಧಿಯೊಂದಿಗೆ 30 ಸದಸ್ಯರನ್ನು ಹೊಂದಿರುತ್ತವೆ. ಭೂಮಿ, ಅರಣ್ಯ, ನೀರು, ಕೃಷಿ, ಗ್ರಾಮ ಪಂಚಾಯಿತಿ, ಆರೋಗ್ಯ, ನೈರ್ಮಲ್ಯ, ಗ್ರಾಮ ಮತ್ತು ಪಟ್ಟಣ ಮಟ್ಟದ ಪೊಲೀಸ್ ವ್ಯವಸ್ಥೆ ಮುಂತಾದ ವಿಷಯಗಳಲ್ಲಿ ಕಾನೂನುಗಳು ಮತ್ತು ನಿಯಮಗಳನ್ನು ರಚಿಸುವ ಅಧಿಕಾರ ಇವುಗಳಿಗೆ ಇದೆ.
ಪ್ರಸ್ತುತ ಈಶಾನ್ಯದಲ್ಲಿ 10 ಸ್ವಾಯತ್ತ ಜಿಲ್ಲಾ ಮಂಡಳಿಗಳಿವೆ - ಅಸ್ಸಾಂ, ಮೇಘಾಲಯ ಮತ್ತು ಮಿಜೋರಾಂಗಳಲ್ಲಿ ತಲಾ ಮೂರು ಹಾಗೂ ತ್ರಿಪುರದಲ್ಲಿ ಒಂದು.
ಲಡಾಖ್ ನಲ್ಲಿ ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿ (LAHDC) ಲೇಹ್ ಮತ್ತು LAHDC ಕಾರ್ಗಿಲ್ ಎಂಬ ಎರಡು ಹಿಲ್ ಕೌನ್ಸಿಲ್ಸ್ ಇದ್ದರೂ, ಇವು 6ನೇ ಪರಿಚ್ಛೇದದಡಿ ಇಲ್ಲ. ಇವುಗಳ ಅಧಿಕಾರಗಳು ಪಾರ್ಕಿಂಗ್ ಶುಲ್ಕ ಸಂಗ್ರಹಣೆ ಮತ್ತು ಕೇಂದ್ರದಿಂದ ವಹಿಸಲ್ಪಟ್ಟ ಭೂಮಿಯ ಹಂಚಿಕೆ ಹಾಗೂ ಬಳಕೆಯಂತಹ ಕೆಲವು ಸ್ಥಳೀಯ ವಿಷಯಗಳಿಗೆ ಮಾತ್ರ ಸೀಮಿತವಾಗಿವೆ.
►ಸೋನಮ್ ವಾಂಗ್ ಚುಕ್ ಅವರನ್ನು ಬಂಧಿಸಿದ್ದೇಕೆ?
ವಾಂಗ್ ಚುಕ್ ಒಬ್ಬ ಎಂಜಿನಿಯರ್ ಮತ್ತು ಪರಿಸರ ಹೋರಾಟಗಾರ. 2009ರ ಹಿಂದಿ ಚಲನಚಿತ್ರ 3 ಈಡಿಯಟ್ಸ್ ನಲ್ಲಿ ಅಮೀರ್ ಖಾನ್ ಅಭಿನಯಿಸಿದ ರಾಂಚೋ ಪಾತ್ರಕ್ಕೆ ಇವರೇ ಸ್ಫೂರ್ತಿ.
2018ರಲ್ಲಿ ದೂರದ ಉತ್ತರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸಮುದಾಯ ಆಧಾರಿತ ಸುಧಾರಣೆಗಳಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಯಿತು.
ಇತ್ತೀಚಿನ ವರ್ಷಗಳಲ್ಲಿ, ವಾಂಗ್ ಚುಕ್ ಲಡಾಖ್ ಆಡಳಿತದಲ್ಲಿ ಸ್ವಾಯತ್ತತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿಹಿಡಿದಿದ್ದಾರೆ. 2019ರಲ್ಲಿ ಅವರು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರಿಗೆ ಪತ್ರ ಬರೆದು, ಲಡಾಖ್ ಗೆ 6ನೇ ಪರಿಚ್ಛೇದದಡಿ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.
6ನೇ ಪರಿಚ್ಛೇದದ ರಕ್ಷಣೆಯನ್ನು 2019ರಲ್ಲಿ ಬಿಜೆಪಿ ನೀಡಿದ ಚುನಾವಣಾ ಭರವಸೆಯಾಗಿ ಉಲ್ಲೇಖಿಸಿ, ಸರ್ಕಾರ ತನ್ನ ಮಾತು ಉಳಿಸಬೇಕು ಎಂದು ವಾಂಗ್ ಚುಕ್ ಹೇಳಿದ್ದಾರೆ. 2025ರ ಪ್ರತಿಭಟನೆಗಳಲ್ಲಿ ಅವರು ಮುಂಚೂಣಿಯಲ್ಲಿದ್ದು, ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು.
ಆದರೆ ಸೆಪ್ಟೆಂಬರ್ 24ರಂದು ಲೇಹ್ ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪವನ್ನು ಕೇಂದ್ರವು ಅವರ ಮೇಲೆ ಹೊರಿಸಿತು. ಆ ಪ್ರತಿಭಟನೆಯಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿ, 50 ಮಂದಿ ಗಾಯಗೊಂಡಿದ್ದರು.
►ಲಡಾಖ್ ನಲ್ಲಿ ಈ ಹಿಂದೆಯೂ ನಡೆದಿತ್ತು ಪ್ರತಿಭಟನೆ
2019ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳಿಗೆ ಮಾಜಿ ಸಂಸದ ಥುಪ್ಸ್ತಾನ್ ಚೆವಾಂಗ್ ಬೆಂಬಲ ನೀಡಿದ್ದು, ನಂತರ ಅವರು ಲೇಹ್ ಅಪೆಕ್ಸ್ ಬಾಡಿ (ABL) ರಚಿಸಿದರು. ಕಾರ್ಗಿಲ್ ನ ಸಂಘಟನೆಗಳು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ರೂಪಿಸಲು ಒಗ್ಗೂಡಿದವು.
2024 ಮಾರ್ಚ್ 6ರಂದು ಗೃಹ ಸಚಿವಾಲಯ ಮತ್ತು ಲಡಾಖ್ ಪ್ರತಿನಿಧಿಗಳ ನಡುವಿನ ಮಾತುಕತೆ ವಿಫಲವಾದ ನಂತರ, ಸೋನಮ್ ವಾಂಗ್ ಚುಕ್ ಲೇಹ್ ನಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. 21 ದಿನಗಳ ಕಾಲ ಅವರು ಮತ್ತು ಅವರ ಬೆಂಬಲಿಗರು ತೀವ್ರ ಚಳಿಯಲ್ಲಿ ಸತ್ಯಾಗ್ರಹ ನಡೆಸಿ, ನೀರು ಮತ್ತು ಉಪ್ಪನ್ನು ಮಾತ್ರ ಸೇವಿಸಿದರು.
ನಂತರ ಚೀನಾ ಗಡಿಗೆ ಯೋಜಿಸಿದ್ದ 'ಪಶ್ಮಿನಾ ಮೆರವಣಿಗೆ'ಯನ್ನು ರದ್ದುಗೊಳಿಸಲಾಯಿತು. CRPC ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಬಗ್ಗೆ ಆಡಳಿತವು ಎಚ್ಚರಿಕೆ ನೀಡಿತ್ತು.
2024 ಸೆಪ್ಟೆಂಬರ್ನಲ್ಲಿ 'ದೆಹಲಿ ಚಲೋ ಪಾದಯಾತ್ರೆ' ಮೂಲಕ ಲಡಾಖ್ ರಾಜ್ಯ ಸ್ಥಾನಮಾನ, 6ನೇ ಪರಿಚ್ಛೇದ ವಿಸ್ತರಣೆ, ನೇಮಕಾತಿ ವ್ಯವಸ್ಥೆ ಮತ್ತು ಸಾರ್ವಜನಿಕ ಸೇವಾ ಆಯೋಗ ಸೇರಿದಂತೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.
►ಲಡಾಖ್ ಅನ್ನು 6ನೇ ಪರಿಚ್ಛೇದದಡಿ ಸೇರಿಸಬಹುದೇ?
2019 ಸೆಪ್ಟೆಂಬರ್ನಲ್ಲಿ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವು ಲಡಾಖ್ ಅನ್ನು 6ನೇ ಪರಿಚ್ಛೇದದಲ್ಲಿ ಸೇರಿಸಲು ಶಿಫಾರಸು ಮಾಡಿತ್ತು. ಈ ಶಿಫಾರಸು ಮೂರು ಪ್ರಮುಖ ಅಂಶಗಳ ಮೇಲೆ ಆಧಾರಿತವಾಗಿದೆ. ಬುಡಕಟ್ಟು ಬಹುಸಂಖ್ಯಾತ ಜನಸಂಖ್ಯೆ (97% ಕ್ಕಿಂತ ಹೆಚ್ಚು), ಹೊರಗಿನವರ ಭೂಸ್ವಾಧೀನದ ನಿಯಂತ್ರಣ, ಮತ್ತು ಸಾಂಸ್ಕೃತಿಕ ಗುರುತಿನ ರಕ್ಷಣೆ.
ಆದರೆ ಗಮನಾರ್ಹವಾಗಿ, ಈಶಾನ್ಯದ ಹೊರಗಿನ ಯಾವುದೇ ಪ್ರದೇಶವನ್ನು 6ನೇ ಪರಿಚ್ಛೇದದಲ್ಲಿ ಸೇರಿಸಲಾಗಿಲ್ಲ. ಮಣಿಪುರದಲ್ಲಿಯೂ ಸಹ, ಬುಡಕಟ್ಟು ಪ್ರದೇಶಗಳಿದ್ದರೂ ಈ ವ್ಯವಸ್ಥೆ ಜಾರಿಗೆ ಬಂದಿಲ್ಲ. ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳೂ 6ನೇ ಪರಿಚ್ಛೇದದಲ್ಲಿಲ್ಲ.
"ಲಡಾಖ್ ಅನ್ನು 6ನೇ ಪರಿಚ್ಛೇದಕ್ಕೆ ಸೇರಿಸುವುದು ಕಷ್ಟಕರ. ಸಂವಿಧಾನವು ಈ ವ್ಯವಸ್ಥೆಯನ್ನು ಮುಖ್ಯವಾಗಿ ಈಶಾನ್ಯಕ್ಕೆ ಮೀಸಲಿಟ್ಟಿದೆ. ಉಳಿದ ಬುಡಕಟ್ಟು ಪ್ರದೇಶಗಳಿಗೆ 5ನೇ ಪರಿಚ್ಛೇದ ಅನ್ವಯಿಸುತ್ತದೆ," ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಅಂತಿಮ ನಿರ್ಧಾರ ಸರ್ಕಾರದ ಕೈಯಲ್ಲಿದೆ. ಸರ್ಕಾರ ಬಯಸಿದರೆ ಸಂವಿಧಾನ ತಿದ್ದುಪಡಿ ಮೂಲಕ ಲಡಾಖ್ ಅನ್ನು 6ನೇ ಪರಿಚ್ಛೇದದಡಿ ಸೇರಿಸುವ ಸಾಧ್ಯತೆ ಇದೆ.

