ಹಿಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು 'ಒಂದು ಬಾರಿಯ ಔದಾರ್ಯದ ಸಂಕೇತವಾಗಿ' ವಿಚಾರಣೆಗೆ ಅನುಮತಿಯನ್ನು ನಿರಾಕರಿಸುವಂತೆ ಹರ್ಯಾಣ ಸರಕಾರಕ್ಕೆ ಸೂಚಿಸಿತ್ತು.
ಸರಕಾರವು ನ್ಯಾಯಾಲಯದ ಸಲಹೆಯನ್ನು ಒಪ್ಪಿಕೊಂಡಿದೆ ಎಂದು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ಹರ್ಯಾಣ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, 'ಭವಿಷ್ಯದಲ್ಲಿ ಇಂತಹ ಕೃತ್ಯಗಳಲ್ಲಿ ತೊಡಗದಂತೆ' ಮಹ್ಮೂದಾಬಾದ್ ಅವರಿಗೆ ಎಚ್ಚರಿಕೆ ನೀಡುವಂತೆ ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರೂ ವಿವೇಕದಿಂದ ವರ್ತಿಸುವಂತೆ ಮಹ್ಮೂದಾಬಾದ್ ಅವರಿಗೆ ಸಲಹೆ ನೀಡಿದರು. ಕೆಲವೊಮ್ಮೆ ಸಾಲುಗಳ ನಡುವೆ ಓದುವ ಮೂಲಕ ಬರವಣಿಗೆಯನ್ನು ಅರ್ಥೈಸಿಕೊಳ್ಳಬಹುದು ಎಂದು ಮಹ್ಮೂದಾಬಾದ್ ಪರ ವಕೀಲರನ್ನು ಉದ್ದೇಶಿಸಿ ಹೇಳಿದ ಅವರು, 'ಕೆಲವೊಮ್ಮೆ ಪರಿಸ್ಥಿತಿಯು ಸೂಕ್ಷ್ಮವಾಗಿರುತ್ತದೆ ಮತ್ತು ನಾವು ಎಚ್ಚರಿಕೆಯಿಂದಿರಬೇಕು' ಎಂದರು.
ವಿಚಾರಣಾ ನ್ಯಾಯಾಲಯದಲ್ಲಿ ಮಹ್ಮೂದಾಬಾದ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಆ.2025ರಿಂದ ಹರ್ಯಾಣ ಸರಕಾರವು ಅವರ ವಿರುದ್ಧ ವಿಚಾರಣೆಗೆ ಅನುಮತಿಯನ್ನು ಕಾಯ್ದಿರಿಸಿಕೊಂಡಿದೆ ಎನ್ನುವುದು ತಿಳಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಜನವರಿಯಲ್ಲಿ ಅವರ ವಿರುದ್ಧ ಮೊಕದ್ದಮೆಯನ್ನು ಸ್ಥಗಿತಗೊಳಿಸಲು ಸೂಚಿಸಿತ್ತು.
ಮಹ್ಮೂದಾಬಾದ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ 'ಗುಪ್ತ ಸಂದೇಶಗಳನ್ನು' ರವಾನಿಸುತ್ತಿದ್ದಾರೆ ಎಂದು ಶಂಕಿಸಿದ್ದ ನ್ಯಾಯಾಲಯವು, ಅವರು ಬಳಸಿದ್ದ ಪದಗುಚ್ಛಗಳ ಸಂಕೀರ್ಣತೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಹರ್ಯಾಣ ಪೋಲಿಸರು ಮೇ 18ರಂದು ಮಹ್ಮೂದಾಬಾದ್ ಅವರನ್ನು ಬಂಧಿಸಿದ್ದರು. 'ಆಪರೇಷನ್ ಸಿಂಧೂರ' ಕುರಿತು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡಿವೆ ಎಂದು ಆರೋಪಿಸಲಾಗಿತ್ತು.
ಹರ್ಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಮತ್ತು ಗ್ರಾಮ ಸರಪಂಚರೋರ್ವರು ಪ್ರತ್ಯೇಕವಾಗಿ ಸಲ್ಲಿಸಿದ್ದ ದೂರುಗಳ ಆಧಾರದಲ್ಲಿ ಸೋನಿಪತ್ ಜಿಲ್ಲೆಯ ರಾಯಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.

