ಜೈಪುರ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿರುದ್ಧ ಜೈಪುರದಲ್ಲಿ ಮೊಕದ್ದಮೆಯೊಂದು ದಾಖಲಾಗಿದೆ.
ಅಯ್ಯರ್ ಶನಿವಾರ ಜೈಪುರದ ಕಾಲೇಜೊಂದರಲ್ಲಿ 'ಭಾರತದ ಭವಿಷ್ಯ: ನಕಲಿ-ಹಿಂದುತ್ವ ಅಥವಾ ಜಾತ್ಯತೀತ ಭಾರತ?' ಎಂಬ ವಿಷಯದ ಕುರಿತು ಸಾರ್ವಜನಿಕ ಉಪನ್ಯಾಸ ನೀಡಿದ್ದರು. ಭಾಷಣದ ವೇಳೆ, ತಾನು 2017ರಲ್ಲಿ ಮೋದಿ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದರು. ತನ್ನ ಆ ಹೇಳಿಕೆ ಮೋದಿಯ ಗುಣದ ಬಗ್ಗೆ ಆಗಿತ್ತೇ ಹೊರತು, ಅವರ ಜಾತಿ ಬಗ್ಗೆ ಆಗಿರಲಿಲ್ಲ ಎಂದು ಹೇಳಿದ ಅವರು, ಹೇಳಿಕೆಯನ್ನು ತಿರುಚಲಾಗಿತ್ತು ಎಂದರು.
ಈ ವೀಡಿಯೊ ಆನ್ಲೈನ್ನಲ್ಲಿ ಪ್ರಸಾರಗೊಂಡ ಬಳಿಕ, ಹಳೆಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಅಯ್ಯರ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರಧಾನಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವುದು ರಾಷ್ಟ್ರದ ಘನತೆಗೆ ಮಾಡುವ ಅವಮಾನ ಎಂದು ಬಿಜೆಪಿ ನಾಯಕರು ಹೇಳಿ, ಸಾರ್ವಜನಿಕ ಕ್ಷಮಾಪಣೆ ನೀಡುವಂತೆ ಅಯ್ಯರ್ ಅವರನ್ನು ಒತ್ತಾಯಿಸಿದರು.
ಈ ನಡುವೆ, ಬಾಬುಲಾಲ್ ತನ್ವರ್ ಎಂಬ ಸ್ಥಳೀಯ ನಿವಾಸಿಯೊಬ್ಬರು, ಅಯ್ಯರ್ ಪ್ರಧಾನಿ ಬಗ್ಗೆ ಮಾತನಾಡುವಾಗ ಅಸಭ್ಯ ಮತ್ತು ನಿಂದನಾತ್ಮಕ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರ ಆಧಾರದಲ್ಲಿ ಪೊಲೀಸರು ಅಯ್ಯರ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

