HEALTH TIPS

ರಾಜ್ಯಸಭೆ ಚುನಾವಣೆ: ಬಿಜೆಪಿ 8, ಬಿಜೆಡಿ 1ರಲ್ಲಿ ಗೆಲುವು

 ನವದೆಹಲಿ: ರಾಜ್ಯಸಭೆಯ 11 ಸದಸ್ಯ ಸ್ಥಾನಗಳಿಗೆ ಒಡಿಶಾ, ಬಿಹಾರ ಮತ್ತು ಹರಿಯಾಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ 8/// ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದರೆ, ಪ್ರಾದೇಶಿಕ ಪಕ್ಷ ಬಿಜೆಡಿ ಒಂದರಲ್ಲಿ ಗೆಲುವು ಸಾಧಿಸಿದೆ. ಹರಿಯಾಣದಲ್ಲಿ ಮತದಾನದ ಗೋಪ್ಯತೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವ ಕಾರಣ, ಮತ ಎಣಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.


ಕಾಂಗ್ರೆಸ್‌ ನೇತೃತ್ವದ 'ಇಂಡಿಯಾ' ಬಣಕ್ಕೆ ಒಂದೆಡೆ ಅಡ್ಡಮತದಾನ ಬಿಸಿ ತಟ್ಟಿದ್ದರೆ, ಇನ್ನೊಂದೆಡೆ ಕೆಲ ಶಾಸಕರು ಮತದಾನದಿಂದ ದೂರ ಉಳಿದಿದ್ದರಿಂದ ಭಾರಿ ಹಿನ್ನಡೆಯಾಗಿದೆ.

ದೇಶದ 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಆದರೆ ಈ ಪೈಕಿ ಏಳು ರಾಜ್ಯಗಳ 26 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಗಳಿಗೆ ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ಮತದಾನ ಜರುಗಿತು.

ಬಿಹಾರದ ಐದೂ ಸ್ಥಾನಗಳ ಗೆದ್ದ ಎನ್‌ಡಿಎ: ಬಿಜೆಪಿ ನೇತೃತ್ವದ ಎನ್‌ಡಿಎ ಬಿಹಾರದ ಎಲ್ಲ ಐದೂ ಸ್ಥಾನಗಳನ್ನು ಗೆದ್ದು ಬೀಗಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌, ಕೇಂದ್ರ ಸಚಿವ ಮತ್ತು ಜೆಡಿಯು ನಾಯಕ ರಾಮನಾಥ್ ಠಾಕೂರ್‌, ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಮತ್ತು ಬಿಜೆಪಿ ನಾಯಕ ಶಿವೇಶ್‌ ಕುಮಾರ್‌ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ನಿತೀಶ್‌ ಕುಮಾರ್‌ ಮತ್ತು ನಿತಿನ್‌ ನವೀನ್‌ ಅವರು ತಲಾ 44 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದರೆ, ರಾಮನಾಥ್‌ ಠಾಕೂರ್‌ ಮತ್ತು ಉಪೇಂದ್ರ ಕುಶ್ವಾಹ ತಲಾ 42 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದರು. ಮೊದಲ ಪ್ರಾಶಸ್ತ್ಯದ 30 ಮತಗಳನ್ನು ಪಡೆದ ಎನ್‌ಡಿಎಯ ಐದನೇ ಅಭ್ಯರ್ಥಿ ಶಿವೇಶ್‌ ಕುಮಾರ್‌ ಅವರು ಎರಡನೇ ಪ್ರಾಶಸ್ತ್ಯದ ಮತಗಳ ನೆರವಿನಿಂದ ಆರ್‌ಜೆಡಿಯ ಎ.ಸಿ. ಸಿಂಗ್‌ ಅವರನ್ನು ಸೋಲಿಸಿದರು.

'ಹಣ ಮತ್ತು ತೋಳ್ಬಲದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ' ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ದೂರಿದ್ದಾರೆ.

ನಾಲ್ವರು ಮತದಾನದಿಂದ ದೂರ: ಬಿಹಾರದಲ್ಲಿ 'ಮಹಾಘಟಬಂಧನ್‌'ನ ನಾಲ್ವರು ಶಾಸಕರು (ಕಾಂಗ್ರೆಸ್‌ನ ಮೂವರು, ಆರ್‌ಜೆಡಿಯ ಒಬ್ಬರು) ಮತದಾನದಿಂದ ದೂರ ಉಳಿದದ್ದು, ಎನ್‌ಡಿಎಯ ಐದನೇ ಅಭ್ಯರ್ಥಿಯ ಗೆಲುವನ್ನು ಸುಲಭವಾಗಿಸಿತು. ಅಸಾದುದ್ದೀನ್‌ ಓವೈಸಿ ಅವರ ಎಐಎಂಐಎಂ ಮತ್ತು ಬಿಎಸ್‌ಪಿ ಬೆಂಬಲ ನೀಡಿದ್ದರೂ ಮಹಾಘಟಬಂಧನ್‌ ಅಗತ್ಯವಿರುವ 41 ಶಾಸಕರನ್ನು ಒಟ್ಟುಗೂಡಿಸುವಲ್ಲಿ ವಿಫಲವಾಯಿತು.

ಆರ್‌ಜೆಡಿ ಫೈಸಲ್‌ ರೆಹಮಾನ್‌, ಕಾಂಗ್ರೆಸ್‌ ಮನೋಹರ್‌ ಪ್ರಸಾದ್‌, ಸುರೇಂದ್ರ ಕುಶ್ವಾಹ ಮತ್ತು ಮನೋಜ್‌ ವಿಶ್ವಾಸ್‌ ಅವರು ಮತಚಲಾಯಿಸಲು ಬರಲಿಲ್ಲ. ಇದಕ್ಕೆ ವ್ಯತಿರಿಕ್ತ ಎಂಬಂತೆ ಎನ್‌ಡಿಎ ಎಲ್ಲ 202 ಶಾಸಕರು ಮತ ಚಲಾಯಿಸಿದರು.

'ತಾಯಿಯ ಅನಾರೋಗ್ಯದ ಕಾರಣದಿಂದ ಮತಚಲಾಯಿಸಲು ಆಗಲಿಲ್ಲ' ಎಂದು ಆರ್‌ಜೆಡಿಯ ಫೈಸಲ್‌ ರೆಹಮಾನ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

'ನಮ್ಮ ಪಕ್ಷದ ಮೂವರು ಶಾಸಕರನ್ನು ಬಿಜೆಪಿಯವರು ಅಪಹರಿಸಿದ್ದಾರೆ. ಈ ಮೂವರೂ ಮಾರ್ಚ್‌ 13ರಿಂದ ಸಂಪರ್ಕಕ್ಕೆ ಸಿಕ್ಕಿಲ್ಲ' ಎಂದು ಬಿಹಾರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಜೇಶ್‌ ರಾಮ್‌ ಆರೋಪಿಸಿದ್ದಾರೆ.

ಒಡಿಶಾದಲ್ಲಿ ಎನ್‌ಡಿಎಗೆ ಮೂರು, ಬಿಜೆಡಿಗೆ 1 ಸ್ಥಾನ: ಒಡಿಶಾದಲ್ಲಿ ಬಿಜೆಪಿಯ ಇಬ್ಬರು, ಬಿಜೆಡಿಯ ಒಬ್ಬರು ಮತ್ತು ಬಿಜೆಪಿ ಬೆಂಬಲಿತ ಒಬ್ಬರು ಸ್ವತಂತ್ರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮನಮೋಹನ್‌ ಸಮಲ್‌, ಸುಜಿತ್‌ ಕುಮಾರ್‌, ಬಿಜೆಡಿಯ ಸಂತೃಪ್ತ್‌ ಮಿಶ್ರಾ ಗೆದ್ದಿದ್ದಾರೆ. ಬಿಜೆಪಿ ಬೆಂಬಲಿತರಾಗಿ ಕಣದಲ್ಲಿದ್ದ ಸ್ವತಂತ್ರ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ದಿಲೀಪ್‌ ರಾಯ್‌ ಅವರು ಬಿಜೆಡಿ ಮತ್ತು ಕಾಂಗ್ರೆಸ್ ಬೆಂಬಲಿತ ದತ್ತೇಶ್ವರ ಹೋಟಾ ವಿರುದ್ಧ ಜಯಗಳಿಸಿದ್ದಾರೆ. ಬಿಜೆಡಿಯ ಕೆಲ ಶಾಸಕರು ಅಡ್ಡಮತ ಮಾಡಿದ್ದರಿಂದ ದಿಲೀಪ್‌ ರಾಯ್‌ ಗೆಲುವು ಸಾಧ್ಯವಾಗಿದೆ.

ಬಿಜೆಡಿಯ ಇಬ್ಬರು ಶಾಸಕರು (ದೇವಿ ರಂಜನ್‌ ತ್ರಿಪಾಠಿ, ಸೌಇಕ್‌ ಬಿಸ್ವಾಲ್‌) ಮತ್ತು ಕಾಂಗ್ರೆಸ್‌ನ ಮೂವರು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ಗೊತ್ತಾಗಿದೆ.

'ನಾನು ಮಾಡಿರುವುದು ಅಡ್ಡಮತದಾನವಲ್ಲ, ಪಕ್ಷ ರಚನೆಯಾದ ಸಿದ್ಧಾಂತವನ್ನು ಬಲಪಡಿಸಲು ಮತ ಚಲಾಯಿಸಿದ್ದೇನೆ. ಬಿಜು ಪರಂಪರೆಯಿಂದ ಬಂದ ದಿಲೀಪ್‌ ಅವರಿಗೆ ಮತ ನೀಡಿದ್ದೇನೆ. ಈ ಪಕ್ಷವು ನವೀನ್‌ ಪಟ್ನಾಯಕ್‌ ಅವರ ಖಾಸಗಿ ಆಸ್ತಿಯಲ್ಲ' ಎಂದು ಬಿಜೆಡಿ ಶಾಸಕ ದೇವಿ ರಂಜನ್‌ ತ್ರಿಪಾಠಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಡಿ ಶಾಸಕ ಸೌವಿಕ್‌ ಬಿಸ್ವಾಲ್‌ ಅವರು, 'ನಾನು ಸೇಡು ತೀರಿಸಿಕೊಂಡಿದ್ದೇನೆ' ಎಂದು ಹೇಳುವ ಮೂಲಕ ಅಡ್ಡಮತದಾನ ಮಾಡಿದ ಸುಳಿವು ನೀಡಿದ್ದಾರೆ. 'ನಾನು ದಿವಂಗತ ಬಿಜು ಪಟ್ನಾಯಕ್‌ ಅವರ ಆಶೀರ್ವಾದ ಪಡೆದ ಅಭ್ಯರ್ಥಿಗೆ ಮತ ನೀಡಿದ್ದೇನೆ. ನನ್ನ ತಂದೆಗೆ ಮಾಡಿದ ಅನ್ಯಾಯ ಮತ್ತು ದಬ್ಬಾಳಿಕೆಗೆ ಈ ಮೂಲಕ ಸೇಡು ತೀರಿಸಿಕೊಂಡಿದ್ದೇನೆ' ಎಂದು ಬಿಸ್ವಾಲ್‌ ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕರಾದ ರಮೇಶ್‌ ಜೆನಾ, ದಶರಥಿ ಗಮಾಂಗ್‌, ಸೋಫಿಯಾ ಫರ್ದೌಸ್‌ ಅವರು ಅಡ್ಡ ಮತದಾನ ಮಾಡಿದ್ದಾರೆ ಎಂದು ಒಡಿಶಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಭಕ್ತ ಚರಣ್‌ ದಾಸ್‌ ಆರೋಪ ಮಾಡಿದ್ದಾರೆ. ಪಕ್ಷವು ಈ ನಾಯಕರ ಇಂತಹ ನಡೆಯನ್ನು ನಿರೀಕ್ಷಿಸಿರಲಿಲ್ಲ ಎಂದ ದಾಸ್‌ ಅವರು, 'ಅಡ್ಡಮತದಾನ ಮಾಡಿದ ಶಾಸಕರ ಅನರ್ಹತೆ ಪ್ರಕ್ರಿಯೆ ಸೇರಿದಂತೆ ಇತರ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ಹೇಳಿದ್ದಾರೆ.

'ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಶಾಸಕರ ಖರೀದಿ ನಡೆದಿದೆ' ಎಂದು ಬಿಜೆಡಿ ಅಧ್ಯಕ್ಷ ನವೀನ್‌ ಪಟ್ನಾಯಕ್‌ ಆರೋಪಿಸಿದ್ದಾರೆ.

ಬಿಜೆಪಿಯ ಶಾಸಕಿ ಉಪಾಸನಾ ಮೊಹಪಾತ್ರ ಅವರಿಗೆ ಎರಡನೇ ಮತಪತ್ರ ನೀಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತು. ಇದನ್ನು ಬಿಜೆಡಿ ಆಕ್ಷೇಪಿಸಿತು. ಈ ಸಂಬಂಧ ಉಂಟಾದ ಗೊಂದಲದಿಂದ ಮತದಾನ ಅರ್ಧಗಂಟೆ ಸ್ಥಗಿತವಾಗಿತ್ತು.

ಹರಿಯಾಣ- ದೂರ ಉಳಿದ ಐಎನ್‌ಎಲ್‌ಡಿ: ಹರಿಯಾಣದಲ್ಲಿ ಇಬ್ಬರು ಶಾಸಕರನ್ನು ಹೊಂದಿರುವ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ದೂರ ಉಳಿಯಿತು. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡರಿಂದಲೂ ಅಂತರ ಕಾಯ್ದುಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಪಕ್ಷ ಹೇಳಿದೆ.

ಹರಿಯಾಣ: ಮತದಾನದ ಗೋಪ್ಯತೆ ಕಾಂಗ್ರೆಸ್‌, ಬಿಜೆಪಿ ಆಕ್ಷೇಪ

ಹರಿಣಾಯ ರಾಜ್ಯಸಭಾ ಚುನಾವಣಾ ವೇಳೆ ಕೆಲಸ ಶಾಸಕರು ಮತದಾನದ ಗೋಪ್ಯತೆ ಕಾಯ್ದುಕೊಂಡಿಲ್ಲ ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ ಆಕ್ಷೇಪಿಸಿವೆ.

ಬಿಜೆಪಿ ಶಾಸಕ ಅನಿಲ್‌ ವಿಜ್‌ ಅವರು ಚಲಾಯಿಸಿದ ಮತಪತ್ರದ ಬಗ್ಗೆ ಕಾಂಗ್ರೆಸ್‌ ಆಕ್ಷೇಪಿಸಿದ್ದರೆ, ಕಾಂಗ್ರೆಸ್‌ ಶಾಸಕರಾದ ಪರಮವೀರ್‌ ಸಿಂಗ್‌ ಮತ್ತು ಭರತ್‌ ಬೇನಿವಾಲ್‌ ಅವರು ಚಲಾಯಿಸಿದ ಮತಪತ್ರಗಳಿಗೆ ಸಂಬಂಧಿಸಿದಂತೆ ಬಿಜೆಪಿ ಆಕ್ಷೇಪಿಸಿದೆ.

ಅಧಿಕೃತ ಏಜೆಂಟ್‌ಗೆ ಮಾತ್ರ ಗುರುತಿಸಲಾದ ಮತಪತ್ರವನ್ನು ತೋರಿಸಬೇಕು. ಆದರೆ ಇಲ್ಲಿ ಈ ನಿಯಮ ಉಲ್ಲಂಘನೆ ಆಗಿದೆ ಎಂದು ಎರಡೂ ಪಕ್ಷದವರು ಆಕ್ಷೇಪಿಸಿದ್ದಾರೆ. ಈ ಕುರಿತು ಆಕ್ಷೇಪಣೆಗಳ ಪರಿಶೀಲನೆ ಬಳಿಕವಷ್ಟೇ ಮತ ಎಣಿಕೆ ನಡೆಯಲಿದೆ.

ಆಯೋಗಕ್ಕೆ ಖರ್ಗೆ ಪತ್ರ: ಮತದಾನದ ಗೋಪ್ಯತೆಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆ ಪರಿಹರಿಸಲು ಮಧ್ಯಪ್ರವೇಶಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ ಶಾಸಕರ ಮತವನ್ನು ಅನರ್ಹಗೊಳಿಸದಂತೆ ಆಗ್ರಹಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries