ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ಪಕ್ಷ ಡಿಎಂಕೆ ತನ್ನ ಮಿತ್ರ ಪಕ್ಷವಾದ ವಿಡುಥಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ಜತೆಗೆ ಮಂಗಳವಾರ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಎರಡು ಸಾಮಾನ್ಯ ಕ್ಷೇತ್ರಗಳೂ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ವಿಸಿಕೆಗೆ ಹಂಚಿಕೆ ಮಾಡಲಾಗಿದೆ.
ಡಿಎಂಕೆ ಕೇಂದ್ರ ಕಚೇರಿಯಲ್ಲಿ ಎರಡೂ ಪಕ್ಷಗಳ ನಾಯಕರ ಉಪಸ್ಥಿತಿಯೊಂದಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ವಿಸಿಕೆ ಮುಖ್ಯಸ್ಥ ತಿರುಮವಲವಾನ್ ಅವರು ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದಗಳ ಪ್ರಕಾರ, ವಿಸಿಕೆ ಪಕ್ಷವು 6 ಮೀಸಲು ಕ್ಷೇತ್ರಗಳಲ್ಲಿ ಹಾಗೂ ಎರಡು ಸಾಮಾನ್ಯ ಕ್ಷೇತ್ರಗಳಲ್ಲಿ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಲಿದೆ.
ಈ ಹಿಂದೆ 10 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದ ವಿಸಿಕೆ, ಮಂಗಳವಾರ ನಡೆದ ಎರಡನೇ ಸುತ್ತಿನ ಮಾತುಕತೆಯಲ್ಲಿ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದೆ. ಈ ಕುರಿತು ವಿಸಿಕೆ ಮುಖ್ಯಸ್ಥ ತಿರುಮವಲವಾನ್ ಮಾತನಾಡಿ, 'ಡಿಎಂಕೆ ತಾನಾಗಿಯೇ ಮುಂದೆ ಬಂದು ತನ್ನ ಕ್ಷೇತ್ರಗಳನ್ನು ತ್ಯಾಗ ಮಾಡುತ್ತಿರುವಾಗ ಮೈತ್ರಿ ಒಕ್ಕೂಟದ ಒಳಿತಿಗಾಗಿ ಕ್ಷೇತ್ರಗಳನ್ನು ಬಿಟ್ಟುಕೊಡುವುದು ನಮ್ಮ ಕರ್ತವ್ಯವೂ ಆಗಿರುತ್ತದೆ' ಎಂದಿದ್ದಾರೆ.
ಅಲ್ಲದೇ, ಮೈತ್ರಿಕೂಟದಲ್ಲಿ 18 ಪಕ್ಷಗಳಿದ್ದು, ಕೆಲವು ಪಕ್ಷಗಳು ಇತ್ತೀಚೆಗೆ ಸೇರ್ಪಡೆಗೊಂಡಿವೆ. ಹೀಗಾಗಿ ಮಿತ್ರ ಪಕ್ಷಗಳ ನಡುವಿನ ಸೀಟು ಹಂಚಿಕೆ ಸಂಬಂಧಿತ ಮಾತುಕತೆಗಳು ಸಮಯ ತೆಗದುಕೊಳ್ಳುತ್ತಿವೆ. ಎಲ್ಲಾ ಪಕ್ಷಗಳ ಜತೆಗಿನ ಮಾತುಕತೆ ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಅಂತಿಮಗೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ.

