ನವದೆಹಲಿ (PTI): 'ರೈಲು ಹೊರಡುವ ಮುನ್ನ 8 ಗಂಟೆಗಳಿಗೂ ಮುಂಚೆ ಟಿಕೆಟ್ ರದ್ದುಪಡಿಸಿದರೆ, ಹಣ ಮರುಪಾವತಿ ಮಾಡುವುದಿಲ್ಲ. ಈಗ ಈ ಅವಧಿಯೂ ನಾಲ್ಕು ಗಂಟೆಯಷ್ಟಿದೆ' ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರೈಲ್ವೆ ಕ್ಷೇತ್ರದಲ್ಲಿ ಹಲವು ಸುಧಾರಣೆಗಳ ಕುರಿತು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಹಣ ಮರುಪಾವತಿ ರದ್ದತಿಯ ಕುರಿತಾದ ಹೊಸ ನಿಯಮವು ಏಪ್ರಿಲ್ 1ರಿಂದ 15ರ ಅವಧಿಯೊಳಗೆ ಜಾರಿಗೆ ಬರಲಿದೆ.
ರೈಲು ಹೊರಡುವ 24 ಗಂಟೆಯಿಂದ 8 ಗಂಟೆಗೂ ಮುಂಚಿತವಾಗಿ ಟಿಕೆಟ್ ರದ್ದುಪಡಿಸಿದರೆ, ಶೇಕಡ 50ರಷ್ಟು ಹಣವನ್ನು ಮರುಪಾವತಿಸಲಾಗುತ್ತದೆ. ಪ್ರಸಕ್ತ ಈ ಸಮಯವು 12 ರಿಂದ 4 ಗಂಟೆಯವರೆಗೂ ಇದೆ.
'72 ಗಂಟೆಯಿಂದ 24 ಗಂಟೆಯವರೆಗೂ ಮುಂಚೆ ಟಿಕೆಟ್ ರದ್ದುಪಡಿಸಿದರೆ, ಟಿಕೆಟ್‌ನ ಒಟ್ಟು ಮೊತ್ತದ ಶೇಕಡ 25ರಷ್ಟು ಹಣ ನೀಡಲಾಗುತ್ತದೆ. ಒಂದೊಮ್ಮೆ 72 ಗಂಟೆಗೂ ಮುಂಚಿತವಾಗಿ ಟಿಕೆಟ್ ರದ್ದುಪಡಿಸಿದರೆ, ಪ್ರತಿ ಪ್ರಯಾಣಿಕರಿಗೂ ಪೂರ್ಣ ಮೊತ್ತ ಪಾವತಿಸಲಾಗುವುದು' ಎಂದು ವೈಷ್ಣವ್ ತಿಳಿಸಿದ್ದಾರೆ.
ಈಗಿರುವ ನೀತಿ ಪ್ರಕಾರ, 48 ಗಂಟೆಯಿಂದ 12 ಗಂಟೆಯವರೆಗೆ ಟಿಕೆಟ್ ರದ್ದುಪಡಿಸಿದರೆ, ಶೇಕಡ 25ರಷ್ಟು ಹಣವನ್ನು ಮರುಪಾವತಿಸಲಾಗುತ್ತದೆ. 48 ಗಂಟೆಗೂ ಮುಂಚಿತವಾಗಿ ಟಿಕೆಟ್ ರದ್ದುಪಡಿಸಿದರೆ ಪೂರ್ತಿ ಹಣ ನೀಡಲಾಗುತ್ತದೆ.
'ಕಾಳಧನ ಮಾರುಕಟ್ಟೆಯಲ್ಲಿ ಕೊನೆಯ ಹಂತದಲ್ಲಿ ಟಿಕೆಟ್ ಮಾರಾಟವನ್ನು ತಪ್ಪಿಸಲು ಈ ನಿಯಮವನ್ನು ಜಾರಿಗೆ ತರಲಾಗಿದೆ. ಮಂಗಳವಾರದಿಂದಲೇ ಈ ನಿಯಮವನ್ನು ಜಾರಿಗೆ ತರಲಾಗಿದೆ. ವಂದೇಭಾರತ್ ಹಾಗೂ ಅಮೃತ್ ಭಾರತ್-2 ರೈಲುಗಳಲ್ಲಿ ಈಗಾಗಲೇ ಈ ನಿಯಮವು ಜಾರಿಯಲ್ಲಿದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2026ರ ಜನವರಿ 16ರಂದು ಇಲಾಖೆಯು ಹೊರಡಿಸಿದ ಅಧಿಸೂಚನೆಯಲ್ಲಿ ಈ ವಿಷಯ ತಿಳಿಸಲಾಗಿತ್ತು.
ಟಿಕೆಟ್ ಮೇಲ್ದರ್ಜೆಗೆ ಅವಕಾಶ: ರೈಲು ಹೊರಡುವ 30 ನಿಮಿಷಕ್ಕೂ ಮುಂಚಿತವಾಗಿ ಕೌಂಟರ್‌ನಿಂದ ಪಡೆಯುವ ಟಿಕೆಟ್‌ನಲ್ಲಿ ಪ್ರಯಾಣ ಮೇಲ್ಹರ್ಜೆಗೆ ಏರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಪ್ರಯಾಣದ ಚಾರ್ಟ್ ತಯಾರಿಗೂ ಮುನ್ನ ಮಾತ್ರ ಅವಕಾಶವಿತ್ತು.
ಬೋರ್ಡಿಂಗ್ ಪಾಯಿಂಟ್ ಬದಲಾವಣೆಗೂ ಅವಕಾಶ: 'ರೈಲು ಹೊರಡುವ ಮುನ್ನ 30 ನಿಮಿಷ ಮುಂಚಿತವಾಗಿ ಪ್ರಯಾಣಿಕರು ತಾವು ಏರುವ ಹಾಗೂ ಇಳಿಯುವ ಜಾಗವನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಚಾರ್ಟ್ ತಯಾರಿಗೂ ಮುನ್ನ ಮಾತ್ರ ಅವಕಾಶವಿತ್ತು. ರೈಲು ಹತ್ತುವ ಸ್ಥಳ ಬದಲಾಯಿಸಿದರೂ ಕೂಡ ಪ್ರಯಾಣದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ' ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರು ತಮಗೆ ಅನುಕೂಲವಾದ ನಿಲ್ದಾಣದಿಂದ ರೈಲು ಏರಲು ಹೊಸ ನಿಯಮವು ಅವಕಾಶ ಕಲ್ಪಿಸಿದೆ.
ಉಪ್ಪು ಸಾಗಣಿಕೆಗೆ ವಿಶೇಷ ಕಂಟೇನರ್: 'ಉಪ್ಪು ಸಾಗಣಿಕೆ ಹಾಗೂ ಆಟೊಗಳ ಸಾಗಣಿಕೆಗೆ ವಿಶೇಷ ಕಂಟೇನರ್‌ಗಳನ್ನು ಪರಿಚಯಿಸಲಾಗಿದ್ದು, ಇದರಿಂದ ಉಪ್ಪು ಮೂಟೆಗಳನ್ನು ಲೋಡ್ ಹಾಗೂ ಅನ್‌ಲೋಡ್ ಮಾಡಲು ಇನ್ನಷ್ಟು ಸರಳವಾಗಿದೆ' ಎಂದು ವೈಷ್ಣವ್ ಮಾಹಿತಿ ನೀಡಿದ್ದಾರೆ.

