HEALTH TIPS

ಬಾಲಕಿ ಅತ್ಯಾಚಾರ: ಹರಿಯಾಣ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿ

ನವದೆಹಲಿ: ಗುರುಗ್ರಾಮದಲ್ಲಿ ಮೂರು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಕುರಿತು ತನಿಖೆ ನಡೆಸುತ್ತಿರುವ ಹರಿಯಾಣ ಪೊಲೀಸರ ವರ್ತನೆ 'ನಾಚಿಕೆಗೇಡಿ'ನದು ಹಾಗೂ 'ಸಂವೇದನಾರಹಿತ'ವಾದುದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಛೀಮಾರಿ ಹಾಕಿದೆ.

ಬಾಲಕಿ ಮೇಲಿನ ಅತ್ಯಾಚಾರ ಕುರಿತಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದಿರುವ ಸುಪ್ರೀಂ ಕೋರ್ಟ್‌, ಇದಕ್ಕಾಗಿ ಮಹಿಳಾ ಐಪಿಎಸ್‌ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಿದೆ.

ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ನೇತೃತ್ವದ ಮೂವರು ಸದಸ್ಯರಿರುವ ನ್ಯಾಯಪೀಠ, ಎಸ್‌ಐಟಿ ರಚನೆ ಕುರಿತು ಕೂಡಲೇ ಅಧಿಸೂಚನೆ ಹೊರಡಿಸುವಂತೆ ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಎಸ್‌ಐಟಿಗೆ ಹಸ್ತಾಂತರಿಸುವಂತೆ ಗುರುಗ್ರಾಮ ಪೊಲೀಸರಿಗೂ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ.ಪಂಚೋಲಿ ಈ ಪೀಠದಲ್ಲಿದ್ದಾರೆ.

'ಈ ಪ್ರಕರಣದಲ್ಲಿ ಎಸಲಾಗಿರುವ ಅಪರಾಧ ಘೋರವಾದುದು. ಆದರೆ, ಹರಿಯಾಣ ಪೊಲೀಸರು ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದಾರೆ. ಪೋಕ್ಸೊ ಕಾಯ್ದೆಯ ಕಠಿಣ ಅವಕಾಶಗಳ ಬದಲು ಸೌಮ್ಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ' ಎಂದು ಹರಿಯಾಣ ಪೊಲೀಸರನ್ನು ಪೀಠ ತರಾಟೆಗೆ ತೆಗೆದುಕೊಂಡಿದೆ.

ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಸಂಪೂರ್ಣವಾಗಿ ಬದಲಿಸಿ ವರದಿ ನೀಡಿರುವ ಖಾಸಗಿ ಆಸ್ಪತ್ರೆಯ ವೈದ್ಯೆಯನ್ನು ಕೂಡ ತರಾಟೆಗೆ ತೆಗೆದುಕೊಂಡ ಪೀಠ, 'ಒಬ್ಬ ವೈದ್ಯೆಯಾಗಿ ಈ ರೀತಿ ಮಾಡಿರುವುದು ನಾಚಿಕೆಗೇಡಿನದು' ಎಂದು ಟೀಕಿಸಿದೆ.

'ಪ್ರಕರಣ ಕುರಿತು ಕಳಪೆ ಮಟ್ಟದ ತನಿಖೆ ನಡೆಸಿದ್ದಕ್ಕಾಗಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ?' ಎಂದು ಗುರುಗ್ರಾಮ ಪೊಲೀಸರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ.

'ಸಮಿತಿಯನ್ನು ರದ್ದು ಮಾಡಬಾರದೇಕೆ?' ಎಂದು ಗುರುಗ್ರಾಮ ಮಕ್ಕಳ ಕಲ್ಯಾಣ ಸಮಿತಿಗೂ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ.

'ಈ ಪ್ರಕರಣದ ವಿಚಾರಣೆಯನ್ನು ಪೋಕ್ಸೊ ನ್ಯಾಯಾಲಯದ ಹಿರಿಯ ಮಹಿಳಾ ನ್ಯಾಯಿಕ ಅಧಿಕಾರಿಯೊಬ್ಬರಿಗೆ ವಹಿಸಬೇಕು' ಎಂದು ಗುರುಗ್ರಾಮ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶನ ನೀಡಿದೆ.

ಪ್ರಕರಣ: 'ಗುರುಗ್ರಾಮದ ಸೆಕ್ಟರ್ 54ರ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಪುರುಷನೊಬ್ಬ, ಎರಡು ತಿಂಗಳ ಹಿಂದೆ ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.

'ಕಳೆದ ವರ್ಷ ಡಿಸೆಂಬರ್‌ ಹಾಗೂ 2026ರ ಜನವರಿ ನಡುವೆ ಈ ಘಟನೆ ನಡೆದಿದೆ. ತಾನು ಅನುಭವಿಸುತ್ತಿರುವ ಯಾತನೆ ಕುರಿತು ಬಾಲಕಿಯು ತಾಯಿಗೆ ಇತ್ತೀಚೆಗೆ ತಿಳಿಸಿದ್ದಾಳೆ. ನಂತರ ಬಾಲಕಿಯ ಪಾಲಕರು ನೀಡಿದ ದೂರಿನ ಮೇರೆಗೆ ಫೆಬ್ರುವರಿ 4ರಂದು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.

ರೈತರಿಗೆಪರಿಹಾರ: ಹಣಕಾಸು ಹೊರೆ ಆಧಾರದ ಮೇಲೆ ನಿರ್ಧರಿಸುವಂತಿಲ್ಲ

ಭೂ ಸ್ವಾಧೀನ ಪ್ರಕರಣದಲ್ಲಿ ರೈತರಿಗೆ ನೀಡುವ ಪರಿಹಾರ ಹಾಗೂ ಬಡ್ಡಿ ಮೊತ್ತವನ್ನು ಸಂಬಂಧಪಟ್ಟ ಸಂಸ್ಥೆ ಮೇಲೆ ಆಗಬಹುದಾದ ಹಣಕಾಸು ಹೊರೆಯ ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಸಮ್ಮತ ಪರಿಹಾರವು ಸಾಂವಿಧಾನಿಕ ಗ್ಯಾರಂಟಿ ಆಗಿದ್ದು ಇದನ್ನು ದುರ್ಬಲಗೊಳಿಸಲು ಸಾಧ್ಯ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ನ್ಯಾಯಮೂರ್ತಿ ಉಜ್ಜಲ್‌ ಭುಯಾನ್ ಅವರು ಇದ್ದ ನ್ಯಾಯಪೀಠ ಹೇಳಿದೆ.

ಭೂಮಿ ಕಳೆದುಕೊಂಡವರಿಗೆ ಭೂಸ್ವಾಧೀನ ಕಾಯ್ದೆಯ ಪ್ರಕಾರ ಶೇ9ರಷ್ಟು ಬಡ್ಡಿ ಪಾವತಿಸಬೇಕೇ ಹೊರತು ಎನ್‌ಎಚ್‌ಎಐ ಕಾಯ್ದೆಯಡಿ ನೀಡುವ ಶೇ5ರ ದರದಲ್ಲಿ ಅಲ್ಲ ಎಂದೂ ಪೀಠ ಸ್ಪಷ್ಟಪಡಿಸಿದೆ.

ಎನ್‌ಎಚ್‌ಎಐ ಕಾಯ್ದೆಯಡಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದ ಪರಿಹಾರಧನ ಮತ್ತು ಬಡಿಯನ್ನು ಪೂರ್ವಾನ್ವಯವಾಗುವಂತೆ ರೈತರಿಗೆ ಪಾವತಿಸಬೇಕು ಎಂದು 2025ರ ಫೆಬ್ರುವರಿ 4ರಂದು ನೀಡಿದ್ದ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ(ಎನ್‌ಎಚ್‌ಎಐ) ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಪೀಠ ಈ ಮಾತು ಹೇಳಿದೆ.

ಭೂಸ್ವಾಧೀನಕ್ಕೆ ಸಂಬಂಧಿಸಿ ನೀಡುವ ಪರಿಹಾರಧನ ಹಾಗೂ ಬಡ್ಡಿ ಮೊತ್ತದಿಂದಾಗಿ ಪ್ರಾಧಿಕಾರಕ್ಕೆ ₹100 ಕೋಟಿ ಹೊರೆಯಾಗುತ್ತದೆ ಎಂದು ಈ ಮೊದಲು ತಿಳಿಸಲಾಗಿತ್ತು. ಆದರೆ ಈ ಹೊರೆ ಪ್ರಮಾಣ ₹29 ಸಾವಿರ ಕೋಟಿಯಷ್ಟಾಗಲಿದೆ. ಹೀಗಾಗಿ ತೀರ್ಪನ್ನು ಮರುಪಶೀಲಿಸಬೇಕು ಎಂದು ಎನ್‌ಎಚ್‌ಎಐ ಕೋರಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries