ಮಾ.12ರಂದು ಸಂಸತ್ತಿನ ಉಭಯ ಸದನಗಳಲ್ಲಿ ಸಲ್ಲಿಸಲಾದ ನೋಟಿಸ್‌ಗಳು 'ಸಾಬೀತಾಗಿರುವ ದುರ್ವರ್ತನೆ' ಆಧಾರದಲ್ಲಿ ಸಿಇಸಿ ವಿರುದ್ಧ ಏಳು ಆರೋಪಗಳನ್ನು ಪಟ್ಟಿ ಮಾಡಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿವೆ.
ನೋಟಿಸ್‌ಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರಿಯೆನ್ ಅವರು,'ನೋಟಿಸ್‌ಗಳ ಕುರಿತು ಕ್ರಮಕ್ಕಾಗಿ ನಾವು ಕಾಯುತ್ತಿದ್ದೇವೆ. ಕೇಂದ್ರ ಸರಕಾರವು ನೋಟಿಸ್‌ಗಳನ್ನು ಕೈಗೆತ್ತಿಕೊಳ್ಳದಿದ್ದರೆ ಕಾರ್ಯಾಂಗ ಮತ್ತು ಸಿಇಸಿ ನಡುವೆ ಅವ್ಯಕ್ತ ಒಪ್ಪಂದದ ಕುರಿತು ಅನುಮಾನಗಳು ಹುಟ್ಟುತ್ತವೆ' ಎಂದು ಹೇಳಿದರು.
ಸಮಾನ ಸ್ಪರ್ಧೆಗೆ ಅವಕಾಶ ಕಲ್ಪಿಸುವುದು ಚುನಾವಣಾ ಪ್ರಜಾಪ್ರಭುತ್ವದ ಮೂಲಸಾರವಾಗಿದೆ ಮತ್ತು ಸಂವಿಧಾನದ ಮೂಲ ರಚನೆಯ ಭಾಗವೂ ಆಗಿದೆ ಎಂದು ನೋಟಿಸ್‌ಗಳಲ್ಲಿ ಉಲ್ಲೇಖಿಸಲಾಗಿದೆ.
'ದುರ್ವರ್ತನೆ ಸಾಬೀತಾಗಿರುವ' ಆರೋಪಗಳಲ್ಲಿ ಸಿಇಸಿ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ನಿಷ್ಠೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲಗೊಂಡಿದ್ದಾರೆ ಹಾಗೂ ಕಾರ್ಯಾಂಗದ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪವೂ ಸೇರಿದೆ.
ಸಿಇಸಿಯಾಗಿ ಕುಮಾರ ನೇಮಕಾತಿ ಪ್ರಕ್ರಿಯೆ,2025 ಆ.17ರಂದು ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಅವರ 'ಪಕ್ಷಪಾತದ'ಪತ್ರಿಕಾಗೋಷ್ಠಿ,ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಭೇದಭಾವದ ವರ್ತನೆ,ತನಿಖೆಗಳಿಗೆ ಅಡೆತಡೆ, ಪಾರದರ್ಶಕ ಸಾಧನಗಳನ್ನು ಒದಗಿಸಲು ನಿರಾಕರಣೆ ಮತ್ತು ಆಡಳಿತ ಪಕ್ಷದ ರಾಜಕೀಯ ಉದ್ದೇಶಗಳಿಗೆ ಅನುಗುಣವಾಗಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಿದ್ದು; ಇವು ಪ್ರತಿಪಕ್ಷಗಳ ಆರೋಪಗಳಲ್ಲಿ ಸೇರಿವೆ.
ಸಿಇಸಿ ತಟಸ್ಥ ಚುನಾವಣಾ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನು ಕಾರ್ಯಾಂಗದ ರಾಜಕೀಯ ಅಜೆಂಡಾವನ್ನು ಕಾರ್ಯಗತಗೊಳಿಸುವ ಸಾಧನವನ್ನಾಗಿ ಪರಿವರ್ತಿಸಿದ್ದಾರೆ. ನಿಷ್ಪಕ್ಷ ಚುನಾವಣೆಗಳನ್ನು ನಡೆಸುವ ಸಂಸ್ಥೆಯಾದ ಅದನ್ನು ಪೌರತ್ವ ನಿರ್ಣಯ ನ್ಯಾಯಮಂಡಳಿಯನ್ನಾಗಿಯೂ ಬದಲಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

