ಪಟ್ನಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ರಾಜೀನಾಮೆ ಸ್ವೀಕರಿಸಲು ಬಿಹಾರ ವಿಧಾನಸಭೆ ಅಧ್ಯಕ್ಷ ಪ್ರೇಮ್ ಕುಮಾರ್ ಅವರು ಭಾನುವಾರ ಇಡೀ ದಿನ ತಮ್ಮ ಕಚೇರಿಯಲ್ಲಿ ಕಾದಿದ್ದರು. ಆದರೆ ನಿತಿನ್ ನವೀನ್ ಅವರು ಬರಲೇ ಇಲ್ಲ.
ಕಾರ್ಯಕ್ರಮ ನಿಮಿತ್ತ ದೆಹಲಿಯಲ್ಲಿದ್ದ ಪ್ರೇಮ್ ಕುಮಾರ್ ಅವರಿಗೆ ಮಾರ್ಚ್ 29ರಂದು ನಿತಿನ್ ನವೀನ್ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಸಂದೇಶ ಹೋಗಿತ್ತು.
'ತುರ್ತಾಗಿ ವಾಪಸ್ ಬನ್ನಿ' ಎಂದು ಬಿಹಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಸರೋಗಿ ದೂರವಾಣಿಯಲ್ಲಿ ತಿಳಿಸಿದ್ದರು. ಹೀಗಾಗಿ ಶನಿವಾರ ರಾತ್ರಿಯೇ ಅವರು ವಿಮಾನದ ಮೂಲಕ ಪಟ್ನಾಕ್ಕೆ ವಾಪಸಾಗಿದ್ದರು.
ಬಂಕಿಪುರ ಕ್ಷೇತ್ರದ ಶಾಸಕರಾಗಿದ್ದ ನಿತಿನ್ ನವೀನ್ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಎರಡು ವಾರದ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
'ರಾಜ್ಯಸಭೆಗೆ ಆಯ್ಕೆಯಾದ 14 ದಿನಗಳಲ್ಲಿ ಶಾಸಕ ಸ್ಥಾನ ತೆರವು ಮಾಡಬೇಕು. ಸೋಮವಾರದವರೆಗೂ ಸಮಯವಿದೆ' ಎಂದು ಸ್ಪೀಕರ್ ಪ್ರೇಮ್ ಕುಮಾರ್ ತಿಳಿಸಿದರು. 'ವರ್ಚುವಲ್' ಆಗಿ ರಾಜೀನಾಮೆ ಸಲ್ಲಿಸಬಹುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ನಿಯಮಗಳ ಪ್ರಕಾರ ಶಾಸಕರು ವೈಯಕ್ತಿಕವಾಗಿ ಹಾಜರಿರಬೇಕು' ಎಂದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಸೋಮವಾರವೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವರೆ ಎಂಬ ಪ್ರಶ್ನೆಗೆ, ' ಅವರು (ನಿತೀಶ್) ವಿಧಾನ ಪರಿಷತ್ ಸದಸ್ಯ, ನನ್ನ ವ್ಯಾಪ್ತಿಗೆ ಬರುವುದಿಲ್ಲ' ಎಂದು ಪ್ರೇಮ್‌ಕುಮಾರ್ ತಿಳಿಸಿದರು.
ನಿತೀನ್ ನವೀನ್ ಅವರು ಅಸ್ಸಾಂ ಚುನಾವಣಾ ಪ್ರಚಾರಕ್ಕೆ ತೆರಳಿದ್ದು, ಸೋಮವಾರ ದೆಹಲಿಗೆ ವಾಪಸಾಗಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.



