ನವದೆಹಲಿ: ಸಹ ಜೀವನ (ಲಿವ್-ಇನ್) ನಡೆಸುತ್ತಿರುವ ದಂಪತಿಗಳು ತಮ್ಮದು 'ಶಾಶ್ವತ' ಸಂಬಂಧ ಎಂದು ಪರಿಗಣಿಸಿದರೆ, ಅವರನ್ನು ಜನಗಣತಿ ವೇಳೆ ವಿವಾಹಿತ ದಂಪತಿಗಳಾಗಿ ಪರಿಗಣಿಸಬೇಕೆಂದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸ್ವಯಂ-ಗಣತಿ ಪೋರ್ಟಲ್‌ನಲ್ಲಿರುವ ಪದೇ ಪದೇ ಕೇಳಲಾಗುವ ಪ್ರಶ್ನೆಗಳ (ಈಂಕಿs) ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಜನಗಣತಿಯ ಸಮಯದಲ್ಲಿ ಸ್ವಯಂ-ಗಣತಿ ಆಯ್ಕೆ ಮಾಡಿಕೊಳ್ಳುವ ಜನರಿಗೆ ಪೋರ್ಟಲ್ ತೆರೆಯಲಾಗಿದೆ. ಇದು ಜನಗಣತಿಯ ಎರಡು ಹಂತಗಳಾದ ಮನೆ ಪಟ್ಟಿ, ವಸತಿ ಗಣತಿ (ಎಚ್‌ಎಲ್‌ಒ) ಮತ್ತು ಜನಸಂಖ್ಯಾ ಗಣತಿಯಲ್ಲಿ ಲಭ್ಯವಿರುತ್ತದೆ.
ದೇಶದ 16ನೇ ಜನಗಣತಿಯ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ಸಾರ್ವಜನಿಕರಿಗೆ ಸುಲಭವಾಗುವಂತೆ ಪೋರ್ಟಲ್, ಪದೇ ಪದೇ ಕೇಳಲಾಗುವ ಪ್ರಶ್ನೆಗಳ (ಈಂಕಿ's) ಪಟ್ಟಿಯನ್ನು ಹೊಂದಿದೆ.
'ಲಿವ್-ಇನ್ ಸಂಬಂಧದಲ್ಲಿರುವ ಸಂಗಾತಿಗಳನ್ನು ವಿವಾಹಿತ ದಂಪತಿ ಎಂದು ಪರಿಗಣಿಸಲಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರಿಸಿರುವ ಕೇಂದ್ರ ಸರ್ಕಾರ, ಅವರು ತಮ್ಮ ಸಂಬಂಧವನ್ನು ಶಾಶ್ವತವೆಂದು ಪರಿಗಣಿಸಿದರೆ, ಅವರನ್ನು ವಿವಾಹಿತ ದಂಪತಿಗಳೆಂದು ಪರಿಗಣಿಸಲಾಗುತ್ತದೆ' ಎಂದು ಹೇಳಿದೆ.
ಏಪ್ರಿಲ್ 1ರಿಂದ ಜನಗಣತಿ ಆರಂಭವಾಗಲಿದೆ. ಮನೆಗಳ ಪಟ್ಟಿ ಮತ್ತು ವಸತಿ ಗಣತಿಯ ಮೊದಲ ಹಂತದಲ್ಲಿ ನಾಗರಿಕರಿಗೆ ಕೇಳಲಾಗುವ 33 ಪ್ರಶ್ನೆಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

