ಕಾಸರಗೋಡು: ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಮತ್ತು ಇದರ ಸಂಬಂಧಿತ ಕಚೇರಿಗಳು ಎಲ್ಲಾ ಮೂಲಸೌಕರ್ಯಗಳೊಂದಿಗೆ ಶೀಘ್ರ ನಿರ್ಮಾಣಕಾರ್ಯ ಪೂರ್ತಿಗೊಳಿಸಲಿರುವುದಾಗಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮೊದಲ ಬಾರಿಗೆ ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಎಂಬಿಬಿಎಸ್ ಮತ್ತು ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಸರ್ಕಾರಿ ವೈದ್ಯಕೀಯ ಕಾಲೇಜಿನ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ. ವೈದ್ಯಕೀಯ ಕಾಲೇಜಿಗೆ ತಾನು ಖುದ್ದು ಭೇಟಿ ನೀಡಿ ಕಾರ್ಯವಿಧಾನಗಳನ್ನು ಪರಿಶೀಲಿಸುವುದರ ಜತೆಗೆ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ವಿದ್ಯಾರ್ಥಿಗಳಿಗೆ ಮತ್ತು ಕಾಲೇಜು ಅಧಿಕಾರಿಗಳಿಗೆ ಭರವಸೆ ನೀಡಿದರು.
ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕ ಸಿಬ್ಬಂದಿ ಹಾಸ್ಟೆಲ್ ಶೀಘ್ರ ತೆರೆದುಕಾರ್ಯಾಚರಿಸಲು ಮೊದಲ ಆದ್ಯತೆ ನೀಡಲಾಗುವುದು. ಆಸ್ಪತ್ರೆ ಬ್ಲಾಕ್ ನಿರ್ಮಾಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು. ವೈದ್ಯಕೀಯ ಕಾಲೇಜು ಆಂತರಿಕ ರಸ್ತೆಯ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಆಸ್ಪತ್ರೆ ಕ್ಯಾಂಟೀನ್ ಪೂರ್ಣ ಪ್ರಮಾಣದಲಿ ಚಟುವಟಿಕೆ ಆರಂಭಿಸಲಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ವಿ. ಚಂದ್ರನ್, ಕಿಟ್ಕೊ ಯೋಜನಾ ವ್ಯವಸ್ಥಾಪಕ, ಲೋಕೋಪಯೋಗಿ ನಿರ್ಮಾಣ ವಿಭಾಗ, ಬಂದರು ಇಂಜಿನಿಯರಿಂಗ್, ಜಲ ಪ್ರಾಧಿಕಾರ ಮತ್ತು ಕೆಎಸ್‍ಇಬಿ ಕಾರ್ಯನಿರ್ವಾಹಕ ಇಂಜಿನಿಯರ್‍ಗಳೊಂದಿಗೆ ಜಿಲ್ಲಾಧಿಕಾರಿಯವರು ಸಮಾಲೋಚನೆ ನಡೆಸಿದರು.
ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಡಾ. ಟಿಜಿ ಸಿಂಧು, ಸೂಪರಿಡೆಂಟ್ ಡಾ. ಆರ್. ಪ್ರವೀಣ್, ನಸಿರ್ಂಗ್ ಕಾಲೇಜು ಅಸೋಸಿಯೇಟ್ ಪೆÇ್ರಫೆಸರ್ ತಸೀಮ್ ಸಬಿತ್, ಉಪ ನಸಿರ್ಂಗ್ ಸೂಪರಿಡೆಂಟ್ ಕೆ. ಎಸ್. ಜಯಕುಮಾರಿ, ಕಾರ್ಯದರ್ಶಿ ಕೆ. ಕೌಶಿಕ್, ಪಿಟಿಎ ಕಾರ್ಯದರ್ಶಿ ಡಾ. ಶಾಲಿನಿ ಕೃಷ್ಣನ್, ಸರ್ಜನ್ ಅನ್ಶಾದ್ ಅವರನ್ನೊಳಗೊಂಡ ತಂಡದೊಂದಿಗೆ ಕಾಸರಗೋಡು ವೈದ್ಯಕೀಯ ಕಾಲೇಜಿನ ಸ್ಥಿತಿಗತಿಯ ಕುರಿತು ಜಿಲ್ಲಾಧಿಕಾರಿ ಚರ್ಚಿಸಿದರು.



