ಹೈದರಾಬಾದ್: ಹೈದರಾಬಾದ್‌ನ ಹೊರವಲಯದಲ್ಲಿ 'ವಿಶ್ವದಲ್ಲಿಯೇ ಅಸಾಧಾರಣ ನಗರ'ವನ್ನು ನಿರ್ಮಾಣ ಮಾಡುತ್ತೇವೆ, ಅಲ್ಲಿಗೆ ಇಲಾನ್ ಮಸ್ಕ್ ಸಹಿತ ವಿಶ್ವದ ಪ್ರಮುಖ ಉದ್ಯಮಿಗಳು ಭೇಟಿ ನೀಡಲಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ.
ಕೋತ್ವಾಲಗುಡದಲ್ಲಿ ಶುಕ್ರವಾರ ಸಂಜೆ ನಡೆದ ಇಕೊ ಹಿಲ್ ಪಾರ್ಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಲುಷಿತಗೊಂಡಿರುವ ಮೂಸಿ ನದಿ ಪುನಶ್ಚೇತನ ಸೇರಿ ರಾಜ್ಯದ ಅಭಿವೃದ್ಧಿ ಕೆಲಸಕ್ಕೆ ವಿರೋಧ ಪಕ್ಷ ಬಿಆರ್‌ಎಸ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
'ನಾವು ವಿಶ್ವದಲ್ಲೇ ಅಸಾಧಾರಣ ನಗರವನ್ನು ನಿರ್ಮಾಣ ಮಾಡುತ್ತೇವೆ. ಅಲ್ಲಿ ನಡೆಯುವ ಅಭಿವೃದ್ಧಿಗಳನ್ನು ಗಮನಿಸಲು ಇಲಾನ್ ಮಸ್ಕ್‌ನಿಂದ ಹಿಡಿದು ಟ್ರಂಪ್‌ವರೆಗೂ ಬರಲಿದ್ದಾರೆ. ಇಲ್ಲಿಗೆ ಬರಲು ಟ್ರಂಪ್ ಅವರಿಗೆ ಸೇರಿದ ಉದ್ಯಮ ಸಂಸ್ಥೆಗಳೊಂದಿಗೆ ನಾವು ಮಾತನಾಡಿದ್ದೇವೆ' ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ರೈಸಿಂಗ್ ಗ್ಲೋಬಲ್ ಸಮ್ಮಿಟ್‌ನಲ್ಲಿ ಭಾಗಿಯಾಗಿದ್ದ ಟ್ರಂಪ್ ಮಿಡಿಯಾ ಆಯಂಡ್ ಟೆಕ್ನಾಲಜಿ ಗ್ರೂಪ್‌ನ ನಿರ್ದೇಶಕ ಎರಿಕ್ ಸ್ವಿಡರ್, ತೆಲಂಗಾಣದಲ್ಲಿ ಬರಲಿರುವ 'ಭಾರತ್ ಫ್ಯೂಚರ್ ಸಿಟಿ'ಯಲ್ಲಿ ಮುಂದಿನ 10 ವರ್ಷಗಳಲ್ಲಿ 1 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ತಿಳಿಸಿದ್ದರು.
ಮೂಸಿ ನದಿ ಪುನಶ್ಚೇತನದ ಜೊತೆಗೆ ಎಲವೇಟೆಡೆಡ್ ಕಾರಿಡಾರ್ ಸೇರಿ ಅಂತರರಾಷ್ಟ್ರೀಯ ಮಟ್ಟದ ಅಭಿವೃದ್ಧಿ ಯೋಜನೆಗನ್ನು ಸರ್ಕಾರ ರೂಪಿಸುತ್ತಿದೆ ಎಂದು ಅವರು ಹೇಳಿದ್ದಾರೆ.

