ನವದೆಹಲಿ: ವಾಣಿಜ್ಯ ಮತ್ತು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಶನಿವಾರ ವಾಗ್ದಾಳಿ ನಡೆಸಿದವು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, 'ಹಣದುಬ್ಬರದ ನೆಪದಲ್ಲಿ ಜನರ ಬೆವರನ್ನು ಹೀರಲಾಗುತ್ತಿದೆ' ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಮಹಿಳಾ ಘಟಕವು ದೆಹಲಿಯಲ್ಲಿ ಪ್ರತಿಭಟನೆ ನಡೆಸಿತು.
ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, 'ಸರ್ಕಾರದ 'ಜನವಿರೋಧಿ' ನೀತಿಗಳ ವಿರುದ್ಧ ಟಿಎಂಸಿ ಮಹಿಳಾ ಘಟಕವು ಭಾನುವಾರ ಪ್ರತಿಭಟನೆ ನಡೆಸಲಿದೆ' ಎಂದು ಹೇಳಿದರು.
'ಕಪ್ಪು ಬಣ್ಣದ ಬಟ್ಟೆ ಧರಿಸುವ ಅಗತ್ಯ ಬಿದ್ದರೆ ಧರಿಸುತ್ತೇವೆ. ಪ್ರಜಾಸತ್ತಾತ್ಮಾಕವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ' ಎಂದು ಮಮತಾ ತಿಳಿಸಿದರು.

