ನವದೆಹಲಿ/ಕೋಲ್ಕತ್ತ (PTI): 'ನನ್ನ ಪಶ್ಚಿಮ ಬಂಗಾಳದ ಭೇಟಿಯ ವೇಳೆ ರಾಜ್ಯ ಸರ್ಕಾರವು ಶಿಷ್ಟಾಚಾರ ಪಾಲಿಸಿಲ್ಲ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಖುದ್ದು ಆರೋಪಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ವಿವರಣೆ ಕೇಳಿ ನೋಟಿಸ್ ನೀಡಿದೆ.
ಭಾನುವಾರ ಸಂಜೆ 5 ಗಂಟೆ ಒಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಕೇಂದ್ರ ಹೇಳಿತ್ತು. ಇದಕ್ಕೆ ರಾಜ್ಯ ಸರ್ಕಾರವು ಅಧಿಕೃತವಾಗಿ ಉತ್ತರ ನೀಡಿಲ್ಲ. ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಂತಲ ಬುಡಕಟ್ಟು ಸಮುದಾಯದ ಅಂತರರಾಷ್ಟ್ರೀಯ ಸಂತಲ ಪರಿಷತ್ತು ತನ್ನ 9ನೇ ವಾರ್ಷಿಕ ಸಮ್ಮೇಳನವನ್ನು ಶನಿವಾರ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗಿತ್ತು. ಸಮ್ಮೇಳನವನ್ನು ಸಿಲಿಗುಡಿಯ ಬಿಧಾನನಗರದಲ್ಲಿ ಆಯೋಜಿಸಲಾಗಿತ್ತು.
ಆದರೆ, ಭದ್ರತೆ ಹಾಗೂ ಇತರೆ ಸಂಚಾರ ಕಾರಣಗಳನ್ನು ನೀಡಿದ ಜಿಲ್ಲಾಡಳಿತವು ಸಮ್ಮೇಳನದ ಜಾಗವನ್ನು ಬಗಡೋಗರ ವಿಮಾನ ನಿಲ್ದಾಣದ ಬಳಿಯ ಗೋಸಾಯಿಪುರಕ್ಕೆ ಸ್ಥಳಾಂತರಿಸಿತು. ಶನಿವಾರ ಮಧ್ಯಾಹ್ನದ ವೇಳೆ ರಾಷ್ಟ್ರಪತಿ ಅವರು ಸಮ್ಮೇಳನ ನಡೆಯುವ ಸ್ಥಳಕ್ಕೆ ಬಂದಿಳಿದಾಗ ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಜನರಿದ್ದರು.
ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ಸಂಸದರಾಷ್ಟ್ರಪತಿ ಮುರ್ಮು ಅವರನ್ನು ಬಿಜೆಪಿಯು ನಿಜವಾಗಿಯೂ ಗೌರವಿಸುತ್ತಿದ್ದರೆ ಮುರ್ಮು ಅವರನ್ನು ನೂತನ ಸಂಸತ್ತಿನ ಉದ್ಘಾಟನೆ ಕಾರ್ಯಕ್ರಮಕ್ಕೆ ಹಾಗೂ ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಬೇಕಿತ್ತು
ನೋಟಿಸ್‌ನಲ್ಲೇನಿದೆ?
ರಾಷ್ಟ್ರಪತಿ ಅವರನ್ನು ಬರ ಮಾಡಿಕೊಳ್ಳುವ ವೇಳೆ ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರು ಹಾಜರಿರಲಿಲ್ಲ ಮತ್ತು ಈ ವೇಳೆ ಸಿಲಿಗುಡಿಯ ಮೇಯರ್ ಮಾತ್ರವೇ ಹಾಜರಿದ್ದರು. ಈ ಎರಡೂ ಶಿಷ್ಟಾಚಾರದ ಗಂಭೀರ ಉಲ್ಲಂಘನೆ
ರಾಷ್ಟ್ರಪತಿ ಅವರಿಗಾಗಿ ನೀಡಲಾಗಿದ್ದ ಶೌಚಾಲಯದಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇರಲಿಲ್ಲ. ಇದಕ್ಕೆ ವಿವರಣೆ ನೀಡಿ * ರಾಷ್ಟ್ರಪತಿ ಅವರು ದೋಣಿಯಲ್ಲಿ ಸಾಗಲು ನಿರ್ಧರಿಸಿದ ಮಾರ್ಗವು ಕಸದಿಂದ ತುಂಬಿಕೊಂಡಿತ್ತು. ಈ ಮಾರ್ಗವನ್ನು ಆಯ್ಕೆ ಮಾಡಲು ಕಾರಣವೇನು?
ಶಿಷ್ಟಾಚಾರ ಉಲ್ಲಂಘಿಸಲು ನೇರ ಕಾರಣರಾದ ಡಾರ್ಜಿಲಿಂಗ್‌ನ ಜಿಲ್ಲಾಧಿಕಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಸಿಲಿಗುಡಿಯ ಪೊಲೀಸ್ ಕಮಿಷನರ್ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ?
'ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ನೀಡಿದ ಭೇಟಿಯ ವೇಳೆ ಶಿಷ್ಟಾಚಾರ ಪಾಲನೆಯಲ್ಲಿ ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗಿಲ್ಲ. ರಾಷ್ಟ್ರಪತಿ ಅವರ ಭೇಟಿಯ ವಿವರಗಳ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿಯೇ ಇರಲಿಲ್ಲ. ಸಮ್ಮೇಳನವನ್ನು ಆಯೋಜಿಸಿದವರೂ ಸರ್ಕಾರಕ್ಕೆ ಮಾಹಿತಿ ನೀಡಿರಲಿಲ್ಲ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ದೋಣಿ ಮಾರ್ಗದಲ್ಲಿ ಕಸ ತುಂಬಿಕೊಂಡಿತ್ತು ಶೌಚಾಲಯದಲ್ಲಿ ನೀರಿನ ಕೊರತೆ ಸೇರಿ ಗ್ರೀನ್ ರೂಮ್‌ನಲ್ಲಿನ ಅವ್ಯವಸ್ಥೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಮಮತಾ 'ಎಲ್ಲ ಅವ್ಯವಸ್ಥೆಗಳಿಗೂ ಸಮ್ಮೇಳನ ಆಯೋಜಕರು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ಹೊಣೆ. ಕಾರ್ಯಕ್ರಮದ ಸ್ಥಳವನ್ನು ನಾವಲ್ಲ ನೀವೇ ಗುರುತಿಸಿದ್ದು' ಎಂದರು.ರಾಷ್ಟ್ರಪತಿ ಭೇಟಿಯ ಮಾಹಿತಿಯನ್ನೇ ನೀಡಿರಲಿಲ್ಲ: ಮಮತಾ
'ರಾಷ್ಟ್ರಪತಿಗೆ ಅಗೌರವ: ಕಳವಳಕಾರಿ'
-ಇಂದು ದೇಶವು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದೆ. ಇದರ ಮುನ್ನಾ ದಿನವೇ ಟಿಎಂಸಿ ಸರ್ಕಾರವು ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅತೀವ ಅಗೌರವ ತೋರಿಸಿದೆ. ಮಹಿಳೆಯೊಬ್ಬರನ್ನು ಬುಡಕಟ್ಟು ಸಮುದಾಯವನ್ನು ರಾಷ್ಟ್ರಪತಿ ಅವರನ್ನು ಅವಮಾನಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಜಾಗೃತ ಜನರು ಟಿಎಂಸಿ ಅನ್ನು ಎಂದಿಗೂ ಕ್ಷಮಿಸುವುದಿಲ್ಲ ನರೇಂದ್ರ ಮೋದಿ ಪ್ರಧಾನಿ (ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣದ ತುಣುಕು)

