ನವದೆಹಲಿ: 'ಪತ್ನಿಯು ಪರಿಚಾರಕಿಯಲ್ಲ, ಜೀವನ ಸಂಗಾತಿ. ಅಡುಗೆ ಮಾಡುವುದು, ಮನೆ ಸ್ವಚ್ಛತೆ ಮತ್ತು ಬಟ್ಟೆ ಒಗೆಯುವುದು ಸೇರಿದಂತೆ ಮನೆಗೆಲಸಗಳನ್ನು ಪತ್ನಿಗೆ ಸಮನಾಗಿ ಪತಿಯೂ ಮಾಡಬೇಕು' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವೊಂದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಅಭಿಪ್ರಾಯಪಟ್ಟಿದೆ.
ಕಿರುಕುಳದ ಕಾರಣ ಹೇಳಿ, ವ್ಯಕ್ತಿಯೊಬ್ಬರು ವಿಚ್ಛೇದನಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣಾ ನ್ಯಾಯಾಲಯವು ಮಂಜೂರು ಮಾಡಿತ್ತು. ಆದರೆ, ಹೈಕೋರ್ಟ್ ಅದನ್ನು ವಜಾಗೊಳಿಸಿತ್ತು. 2017ರಲ್ಲಿ ಮದುವೆಯಾಗಿದ್ದ ದಂಪತಿ, 2019ರಿಂದ ಪ್ರತ್ಯೇಕವಾಗಿದ್ದರು.
'ಕಿರುಕುಳ ಏನು?' ಎಂದು ಸುಪ್ರೀಂ ಪೀಠವು ಅರ್ಜಿದಾರರ ಪರ ವಕೀಲರನ್ನು ಪಶ್ನಿಸಿತು. 'ಆಕೆ ಅನುಚಿತವಾಗಿ ವರ್ತಿಸುತ್ತಿದ್ದು, ಅಡುಗೆ ಮಾಡುತ್ತಿಲ್ಲ' ಎಂದು ವಕೀಲರು ತಿಳಿಸಿದರು.
'ಕಾಲ ಬದಲಾಗಿದೆ. ನೀವೂ ಮನೆ ಕೆಲಸಗಳಲ್ಲಿ ಸರಿ ಸಮಾನವಾಗಿ ಭಾಗವಹಿಸಬೇಕು. ಹೈಕೋರ್ಟ್ ಸರಿಯಾದ ಆದೇಶ ನೀಡಿದೆ' ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು.
'ಇಬ್ಬರೂ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರನ್ನೂ ಕರೆಸಿ, ಅವರೊಂದಿಗೆ ಮಾತನಾಡುತ್ತೇವೆ' ಎಂದು ಸೂಚಿಸಿದ ಪೀಠ, ಏಪ್ರಿಲ್ 27ಕ್ಕೆ ವಿಚಾರಣೆಯನ್ನು ಮುಂದೂಡಿ, ಖುದ್ದು ಹಾಜರಾಗಲು ಸೂಚಿಸಿತು.

