HEALTH TIPS

ಅತ್ಯಾಚಾರ ಆರೋಪಿ ಖರತ್ ಜತೆ ನಂಟು: ಮಹಾ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ರಾಜೀನಾಮೆ

 ಮುಂಬೈ: ಅತ್ಯಾಚಾರ ಆರೋಪಿ, ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಜತೆಗೆ ನಂಟು ಹೊಂದಿರುವ ಆರೋಪದ ಮೇಲೆ ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿರುವ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಎನ್‌ಸಿಪಿ ಮಹಿಳಾ ವಿಭಾಗದ ಮುಖ್ಯಸ್ಥೆಯೂ ಆಗಿರುವ ಚಕಂಕರ್, ಉಪಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷೆ ಸುನೇತ್ರಾ ಪವಾರ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.


ಮೂಲಗಳ ಪ್ರಕಾರ, ಅವರು ಶುಕ್ರವಾರ ಸಂಜೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭೇಟಿಯಾಗಿದ್ದು, ಈ ವೇಳೆ ರಾಜೀನಾಮೆ ನೀಡುವಂತೆ ಅವರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಚಕಂಕರ್ ಅವರು ಫಡಣವೀಸ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2024ರ ಅಕ್ಟೋಬರ್ 15 ರಂದು ಅವರನ್ನು ಈ ಹುದ್ದೆಗೆ( ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ) ನೇಮಕ ಮಾಡಲಾಗಿತ್ತು.

'ವೈಯಕ್ತಿಕ ಕಾರಣಗಳಿಂದ ನಾನು ಈ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ರಾಜ್ಯ ಸರ್ಕಾರ ಮತ್ತು ಸಹೋದ್ಯೋಗಿಗಳ ಸಹಕಾರಕ್ಕೆ ಧನ್ಯವಾದ' ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ

ರೂಪಾಲಿ ಚಕಂಕರ್ ಅವರು, ಅಶೋಕ್ ಖರತ್ ಜತೆಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಡಿದ್ದವು. ಇದು ರಾಜಕೀಯ ವಿವಾದಕ್ಕೆ ತಿರುಗಿ, ಚಕಂಕರ್ ಅವರು ರಾಜೀನಾಮೆ ನೀಡುವಂತೆ ವಿರೋಧ ಪಕ್ಷದ ನಾಯಕರು ಆಗ್ರಹಿಸಿದ್ದರು.

ಮಹಿಳೆಯರಿಗೆ ನ್ಯಾಯ ಒದಗಿಸಬೇಕಾದ ಸಾಂವಿಧಾನಿಕ ಸ್ಥಾನದಲ್ಲಿರುವವರು ಇಂತಹ ಆರೋಪಿಯೊಂದಿಗೆ ನಿಕಟ ಸಂಬಂಧ ಹೊಂದಿರುವುದು ನೈತಿಕವಾಗಿ ಸರಿಯಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್, ವಕ್ತಾರೆ ಸುಷ್ಮಾ ಅಂಧಾರೆ ಪ್ರತಿಪಾದಿಸಿದ್ದರು.

ಜ್ಯೋತಿಷಿ ಎಂದು ಹೇಳಿಕೊಳ್ಳುವ ಖರತ್‌ನ ಪ್ರಭಾವದಿಂದ, ಚಕಂಕರ್ ಮಾಂತ್ರಿಕ ಆಚರಣೆಯ ಭಾಗವಾಗಿ ತನ್ನ ಉಂಗುರ ಬೆರಳನ್ನು ಕತ್ತರಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸುಷ್ಮಾ ಅಂಧಾರೆ, ಚಕಂಕರ್ ಅವರು ಉಂಗುರ ಬೆರಳಿಗೆ ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಎನ್‌ಸಿಪಿ (ಶರದ್ ಪವಾರ್ ಬಣ) ಸದಸ್ಯೆ ಮತ್ತು ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಕೂಡ ಚಕಂಕರ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮರ್ಚೆಂಟ್ ನೇವಿಯ ನಿವೃತ್ತ ಅಧಿಕಾರಿ (ಕ್ಯಾಪ್ಟನ್‌) ಎಂದು ಹೇಳಿಕೊಂಡಿರುವ ಖರತ್, ಆಧ್ಯಾತ್ಮದ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಆರ್ಥಿಕ ವಂಚನೆ ಮತ್ತು ಭೂಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದೂ ದಮಾನಿಯಾ ಆರೋಪಿಸಿದ್ದಾರೆ.

ಇಷ್ಟು ದೊಡ್ಡ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಯೊಂದಿಗೆ ಮಹಿಳಾ ಆಯೋಗದ ಅಧ್ಯಕ್ಷರೇ ಗುರುತಿಸಿಕೊಂಡರೆ ಮಹಿಳೆಯರು ನ್ಯಾಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಪ್ರತಿಪಕ್ಷಗಳು ಪ್ರಶ್ನಿಸಿದ್ದವು.

ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧನ

35 ವರ್ಷದ ಮಹಿಳೆಯ ಮೇಲೆ ಸತತ ಮೂರು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಶೋಕ್ ಖರತ್‌ನನ್ನು ಪೋಲೀಸರು ನಾಸಿಕ್‌ನಲ್ಲಿ (ಮಾರ್ಚ್‌ 18) ಬಂಧಿಸಿದ್ದಾರೆ.

ತನಿಖೆಯ ವೇಳೆ ಆತನ ಬಳಿಯಿದ್ದ ಪೆನ್ ಡ್ರೈವ್‌ನಲ್ಲಿ 58 ಆಕ್ಷೇಪಾರ್ಹ ವಿಡಿಯೊಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಧಾರ್ಮಿಕ ವಿಧಿವಿಧಾನಗಳ ಹೆಸರಲ್ಲಿ ಮಹಿಳೆಯರ ನಂಬಿಕೆಯನ್ನು ಗಳಿಸಿ, ಬಳಿಕ ಅವರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

35 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಖರತ್‌ನನ್ನು ಬಂಧಿಸಲಾಗಿದೆ. ಪತಿಯ ಜೀವಕ್ಕೆ ಬೆದರಿಕೆ ಇದೆ ಎಂದು ‌ಭವಿಷ್ಯ ಹೇಳಿದ್ದ ಆರೋಪಿ ಆಕೆಯನ್ನು ತನ್ನ ಕಚೇರಿಗೆ ಕರೆಸಿಕೊಂಡಿದ್ದ. ಈ ವೇಳೆ ಮತ್ತುಬರುವ ಪಾನೀಯ ನೀಡಿ 2022ರ ನವೆಂಬರ್‌ನಿಂದ 2025ರ ಡಿಸೆಂಬರ್ ನಡುವೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವೈಯಕ್ತಿಕ ಜೀವನದ ಬಗ್ಗೆ ಮಾಹಿತಿಯಿಲ್ಲ

ಖರತ್ ಜತೆ ಚಕಂಕರ್ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುತ್ತಿರುವ ಮತ್ತು ಆತನಿಗೆ ಗೌರವ ಸೂಚಕವಾಗಿ ಛತ್ರಿ ಹಿಡಿದಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವಿವಾದ ಸೃಷ್ಟಿಸಿದ ಬಳಿಕ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದ ರೂಪಾಲಿ, 'ನನ್ನ ಮತ್ತು ಆತನ ಒಡನಾಟ ಅತ್ಯಂತ ಸೀಮಿತವಾಗಿತ್ತು. ಆತನ ವೈಯಕ್ತಿಕ ಜೀವನ ಅಥವಾ ಅಪರಾಧ ಕೃತ್ಯಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದರು.

ಖರತ್ ಪ್ರಕರಣದಲ್ಲಿ ಹೆಚ್ಚುವರಿ ಮಹಾನಿರ್ದೇಶಕರ ಶ್ರೇಣಿಯ ಮಹಿಳಾ ಪೊಲೀಸ್ ಅಧಿಕಾರಿ ಎಸ್‌ಐಟಿ ತನಿಖೆಯ ನೇತೃತ್ವ ವಹಿಸಬೇಕು ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಅತುಲ್ ಲೊಂಡೆ ಆಗ್ರಹಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries