ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಬಂಧಿಸಲಾಗಿದ್ದ ಇಬ್ಬರು ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸಾಮಾಜಿಕ ಜಾಲತಾಣಗಳ ಮೂಲಕ ಸಂಚು ರೂಪಿಸಿದ ಆರೋಪದಲ್ಲಿ ಹ್ಯಾರಿಸ್ ನಿಸಾರ್ ಲಾಂಗೂ ಮತ್ತು ಜಮೀನ್ ಆದಿಲ್ ಭಟ್ ಅವರನ್ನು ಎನ್‌ಐಎ 2021ರಲ್ಲಿ ವಶಕ್ಕೆ ಪಡೆದಿತ್ತು.
ವಿಚಾರಣಾ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು 2023ರಲ್ಲಿ ತಿರಸ್ಕರಿಸಿತ್ತು.
ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ರವೀಂದರ್ ದುದೇಜಾ ಅವರ ನ್ಯಾಯ ಪೀಠವು, ಇಬ್ಬರು ಆರೋಪಿಗಳು ಈಗಾಗಲೇ ಅನುಭವಿಸಿರುವ ನಾಲ್ಕೂವರೆ ವರ್ಷಗಳ ಸರೆವಾಸ, ಮತ್ತು ಕೃತ್ಯದಲ್ಲಿ ಅವರ ಸೀಮಿತ ಪಾತ್ರವನ್ನು ಪರಿಗಣಿಸಿ, ಜಾಮೀನು ಅರ್ಜಿಯನ್ನು ಮಾನ್ಯ ಮಾಡಿದೆ.

