ಭುವನೇಶ್ವರ: ದಟ್ಟ ಅರಣ್ಯದಲ್ಲಿ ಅಡಗಿರುವ ನಕ್ಸಲ್ ನಾಯಕ ಸುಕ್ರು ಅವರನ್ನು ಹಿಡಿಯಲು ಒಡಿಶಾ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಡಿಜಿಪಿ ವೈ.ಬಿ. ಖುರಾನಿಯಾ ಶುಕ್ರವಾರ ಹೇಳಿದ್ದಾರೆ.
ನಕ್ಸಲ್‌ನ ಈ ನಾಯಕ ಅಡಗಿರುವ ಪ್ರದೇಶದ ಬಗ್ಗೆ ಸುಳಿವು ದೊರೆತಿದ್ದು, ಶೋಧ ಕೈಗೊಳ್ಳಲಾಗಿದೆ.
ಈಗಾಗಲೇ ಸುಕ್ರು ತಲೆಗೆ ₹55 ಲಕ್ಷ ಬಹುಮಾನವೂ ಘೋಷಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಂದಮಲ್, ರಾಯಗಡ, ಕಲಹಂಡಿ ಜಿಲ್ಲೆಗಳು ಸಂದಿಸುವ ಅರಣ್ಯದಲ್ಲಿ ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭದ್ರತಾ ಪಡೆಗಳನ್ನು ಒಳಗೊಂಡಿರುವ ಕೇಂದ್ರ ಪಡೆಗಳು ಮತ್ತು ಒಡಿಶಾ ಪೊಲೀಸರು ಜಂಟಿಯಾಗಿ ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಒಡಿಶಾ ಪೊಲೀಸರು ಡ್ರೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳನ್ನು ಬಳಸಿಕೊಂಡು ಸುಕ್ರು ಅಡಗಿರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಡಿಶಾದ ಮಲ್ಕಂಗಿರಿ ಜಿಲ್ಲೆಯವರಾದ ಸುಕ್ರು (49), ಛತ್ತೀಸಗಢದ ಸುಮಾರು 13 ನಕ್ಸಲರನ್ನು ಒಳಗೊಂಡ ಸಣ್ಣ ಗುಂಪನ್ನು ಮುನ್ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

