ಆ ಕಡೆಯಿಂದ ದಾಳಿ ಮಾಡದ ಹೊರತು ನಾವು ನೆರೆ ದೇಶಗಳ ಮೇಲೆ ಮುಂದೆಂದೂ ದಾಳಿ ಮಾಡುವುದಿಲ್ಲ ಎಂದು ಅಧ್ಯಕ್ಷರು ಭರವಸೆ ನೀಡಿದ್ದಾರೆ.
'ದಾಳಿ ನಡೆಸಿದ್ದಕ್ಕಾಗಿ ನನ್ನ ಮತ್ತು ದೇಶದ ಪರವಾಗಿ ನಾನು ನೆರೆಯ ದೇಶಗಳ ಕ್ಷಮೆ ಕೇಳಲೇಬೇಕು. ನೆರೆಯ ದೇಶಗಳ ಮೇಲೆ ಇನ್ನುಮುಂದೆ ಯಾವುದೇ ದಾಳಿ ನಡೆಸದಿರಲು ಇರಾನ್‌ನ ಮಧ್ಯಂತರ ನಾಯಕತ್ವ ಮಂಡಳಿ ತೀರ್ಮಾನಿಸಿದೆ. ಗಲ್ಫ್ ದೇಶಗಳ ಕಡೆಯಿಂದ ದಾಳಿ ಮಾಡದ ಹೊರತು ನಮ್ಮ ಕಡೆಯಿಂದ ಮುಂದೆಂದೂ ದಾಳಿ ಮಾಡುವುದಿಲ್ಲ' ಎಂದು ಅವರು ಹೇಳಿದ್ಧಾರೆ.
ಇರಾನ್ ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ. ಇರಾನ್ ಜನರ ಶರಣಾಗತಿಯ ಬಯಕೆಯನ್ನು ಶತ್ರುಗಳು ಮರೆತುಬಿಡಬೇಕು ಎಂದು ಅವರು ಹೇಳಿದ್ದಾರೆ.
ಪರಮಾಣು ಒಪ್ಪಂದ ಮಾತುಕತೆ ಮುರಿದುಬಿದ್ದ ನಂತರ ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸಿದೆ ಎಂಬ ವರದಿಗಳ ಬೆನ್ನಲ್ಲೇ ಫೆಬ್ರುವರಿ 28ರಂದು ಇರಾನ್‌ನಾದ್ಯಂತ ಅಮೆರಿಕ ಮತ್ತು ಇಸ್ರೇಲ್ ಸಂಘಟಿತ ವೈಮಾನಿಕ ದಾಳಿ ನಡೆಸಿದ್ದವು.
'ಆಪರೇಷನ್ ಎಪಿಕ್ ಫ್ಯೂರಿ' ಎಂದು ಕರೆಯಲಾದ ಈ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ, ಅವರ ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗಳು ಮೃತಪಟ್ಟಿದ್ದರು.
ಅಂದಿನಿಂದ ಇರಾನ್, ಇಸ್ರೇಲ್ ಮತ್ತು ಅಮೆರಿಕ ಯುದ್ಧದಲ್ಲಿ ತೊಡಗಿದ್ದು, ಗಲ್ಫ್ ದೇಶಗಳ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿತ್ತು.

