ಕೊಚ್ಚಿ: 'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನುಭವದಿಂದ ಪಾಠಗಳನ್ನು ಕಲಿಯುತ್ತಿಲ್ಲ. ಅವರ ಪಕ್ಷವು ಬಿಜೆಪಿಯ ಬಿ ಟೀಂ ಆಗಿದೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.
ಆ ಮೂಲಕ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.
ಕೇಂದ್ರೀಯ ತನಿಖಾ ಸಂಸ್ಥೆಗಳು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊರತುಪಡಿಸಿ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸುತ್ತಿವೆ ಅಥವಾ ಕರೆದು ವಿಚಾರಣೆ ನಡೆಸುತ್ತಿವೆ' ಎಂಬ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಈ ಕುರಿತಂತೆ ಕೂತಮಂಗಲಂನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,'ರಾಹುಲ್ ಗಾಂಧಿ ಅವರು ರಾಷ್ಟ್ರೀಯ ನಾಯಕ. ಪ್ರಾದೇಶಿಕ ನಾಯಕನ ಕುರಿತಂತೆ ಅವರಿಗೆ ಯಾವುದೇ ಮಾಹಿತಿಯಿಲ್ಲ. ಯಾವ ವಿಚಾರವನ್ನು ಕೂಡ ಸ್ಪಷ್ಟವಾಗಿ ತಿಳಿದುಕೊಂಡಿಲ್ಲ. ತನ್ನ ಅನುಭವದಿಂದಲೂ ಪಾಠ ಕಲಿತುಕೊಂಡಿಲ್ಲ' ಎಂದು ಆರೋಪಿಸಿದ್ದಾರೆ.
'ಒಬ್ಬ ರಾಜಕೀಯ ನಾಯಕನಿಗೆ ಇರಬೇಕಾದ ಯೋಗ್ಯ ಲಕ್ಷಣಗಳಿಲ್ಲ. ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ಇಷ್ಟೊಂದು ಕುಸಿತ ಕಾಣಲು ಹೇಗೆ ಸಾಧ್ಯ? ಈ ಎಲ್ಲವನ್ನೂ ಗಮನಿಸಿದರೆ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಬಿಜೆಪಿಯ ಬಿ ಟೀಂ ಆಗಿದೆ' ಎಂದು ಹೇಳಿದ್ದಾರೆ.
'ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸುವಂತೆ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಕೂಡ ಒತ್ತಾಯಿಸಿದ್ದರು. ನಂತರ ಈ ಪ್ರಕರಣದಲ್ಲಿ ಕೇಜ್ರಿವಾಲ್ ಖುಲಾಸೆಯಾದರು. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮಾಡಿದ ಕಪಾಳಮೋಕ್ಷ' ಎಂದು ತಿರುಗೇಟು ನೀಡಿದ್ದಾರೆ.
'ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷದೊಂದಿಗೆ ಕೈ ಜೋಡಿಸಿ ಚುನಾವಣೆ ಎದುರಿಸುವ ಬದಲು ಪ್ರತ್ಯೇಕವಾಗಿ ಸ್ಪರ್ಧಿಸಿ, ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣರಾದರು. ಹರಿಯಾಣ ಹಾಗೂ ಬಿಹಾರದಲ್ಲಿ ಮೈತ್ರಿಪಕ್ಷದ ಜೊತೆಗೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳದೇ ಅಲ್ಲಿ ಕೂಡ ಬಿಜೆಪಿ ಗೆಲ್ಲಲು ರಾಹುಲ್ ಗಾಂಧಿಯೇ ಕಾರಣ' ಎಂದು ವಿಜಯನ್ ಆರೋಪಿಸಿದರು.
2006ರಲ್ಲಿ ಉತ್ತರ ಪರವೂರ್‌ನ ಮನಕ್ಕಪ್ಪಡಿ ಶಾಲೆಯಲ್ಲಿ ನಡೆದ ಆರ್‌ಎಸ್‌ಎಸ್‌ನ 2ನೇ ಸರಸಂಘಚಾಲಕ ಎಂ.ಎಸ್.ಗೋಲ್ವಲ್‌ಕರ್ ಅವರ ಶತಮಾನೋತ್ಸವದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ್ದ ವಿ.ಡಿ.ಸತೀಶನ್. ಈ ಚಿತ್ರವನ್ನು ಪಿಣರಾಯಿ ವಿಜಯನ್ ತನ್ನ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಸತೀಶನ್-ಪಿಣರಾಯಿ ನಡುವೆ ಆರೋಪ-ಪ್ರತ್ಯಾರೋಪ
ತಿರುವನಂತಪುರಂ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಸಿಪಿಎಂ ನಡುವೆ ಒಪ್ಪಂದ ನಡೆದಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ವಿ.ಡಿ.ಸತೀಶನ್ ಅವರು ಆರ್‌ಎಸ್‌ಎಸ್ ಜೊತೆಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿರುವ ಪಿಣರಾಯಿ ವಿಜಯನ್ ಇದಕ್ಕೆ ಸಾಕ್ಷಿಯಾಗಿ 'ಎಕ್ಸ್'ಖಾತೆಯಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
'ಜಾತ್ಯಾತೀತ ಕೇರಳದ ಜನರು ಸತೀಶನ್ ಅವರು ನೈಜ ಮುಖವನ್ನು ಅರಿತುಕೊಳ್ಳಬೇಕು. ಪರವೂರ್ ವಿಧಾನಸಭಾ ಕ್ಷೇತ್ರದ ಮನಕ್ಕಪ್ಪಡಿ ಶಾಲೆಯಲ್ಲಿ 2006ರ ಫೆಬ್ರುವರಿಯಲ್ಲಿ ನಡೆದಿದ್ದ ಆರ್‌ಎಸ್‌ಎಸ್‌ನ 2ನೇ ಸರಸಂಘಚಾಲಕ ಎಂ.ಎಸ್. ಗೋಲ್ವಾಲ್‌ಕರ್ ಶತಮಾನೋತ್ಸವ ಕಾರ್ಯಕ್ರಮವನ್ನು ಸತೀಶನ್ ಅವರು ದೀಪ ಬೆಳಗಿಸಿ ಚಾಲನೆ ನೀಡಿದ್ದರು' ಎಂದು ಫೋಟೋ ಅಪ್‌ಲೋಡ್ ಮಾಡಿದ್ದಾರೆ. '2001 ಹಾಗೂ 2006ರಲ್ಲಿ ಹಿಂದೂ ಐಕ್ಯವೇದಿ ಸಂಘಟನೆಯು ಪರವೂರ್ ಕ್ಷೇತ್ರದಲ್ಲಿ ಸತೀಶನ್ ಅವರ ಗೆಲುವಿಗೆ ಶ್ರಮಿಸಿತ್ತು' ಎಂದು ದೂರಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ವಿ.ಡಿ.ಸತೀಶನ್ ಅವರು 'ಸಿಪಿಎಂನ ಹಲವು ನಾಯಕರು ಬಿಜೆಪಿ ನಾಯಕರಾದ ಎಲ್.ಕೆ. ಆಡ್ವಾಣಿ ಸೇರಿದಂತೆ ಹಲವು ನಾಯಕರ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು' ಎಂದು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. 1989ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ವಿ.ಪಿ.ಸಿಂಗ್ ಅವರು ಬಿಜೆಪಿ ಹಾಗೂ ಸಿಪಿಎಂ ಬೆಂಬಲದೊಂದಿಗೆ ಉರುಳಿಸಿದ್ದರು' ಎಂದು ಹೇಳಿದ್ದಾರೆ. 'ಬಿಜೆಪಿ ನಾಯಕರಾದ ನಿರ್ಮಲಾ ಸೀತಾರಾಮನ್ ಹಾಗೂ ನಿತಿನ್ ಗಡ್ಕರಿ ಜೊತೆಗೆ ವಿಜಯನ್‌ಈಗಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ' ಎಂದು ದೂರಿದ್ದಾರೆ.

