ಕೋಲ್ಕತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ವೇಳೆ, ಪಶ್ಚಿಮ ಬಂಗಾಳದಾದ್ಯಂತ ಮುಖ್ಯವಾಗಿ ಮತುವಾ ಸಮುದಾಯಕ್ಕೆ ಸೇರಿದ ಸಾವಿರಾರು ಮತದಾರರ ಹೆಸರುಗಳನ್ನು ಅಳಿಸಿಹಾಕಿರುವುದರ ವಿರುದ್ಧ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಕೆಂಡ ಕಾರಿದ್ದಾರೆ.
ಮತುವಾ ಸಮುದಾಯದ ಮಾತೆ ಬಿನಪಾನಿ ದೇವಿಯ ಪುಣ್ಯತಿಥಿಯ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮಮತಾ, ದೇಶದ ಪೌರತ್ವವನ್ನು ಕೊಡುವ ನೆವದಲ್ಲಿ ಬಿಜೆಪಿಯು ಮತುವಾ ಜನರನ್ನು ''ಅನಿಶ್ಚಿತತೆ ಮತ್ತು ಗೊಂದಲದಲ್ಲಿ ಕೆಡವಿದೆ'' ಎಂದು ಆರೋಪಿಸಿದರು.
ಉತ್ತರ 24 ಪರಗಣ, ನಾದಿಯ, ಜಲ್ಪಾಯಿಗುರಿ ಮತ್ತು ಬರ್ದಮಾನ್ ಜಿಲ್ಲೆಗಳ ಸಾವಿರಾರು ಮತುವಾ ಜನರ ಹೆಸರುಗಳನ್ನು ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಫೆಬ್ರವರಿ 28ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
''ಈ ಸಮುದಾಯದ ಜನರ ಗುರುತಿಗೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಗಳಿಂದ ಅವರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕಲಾಗುತ್ತಿದೆ. ಈ ಜನರು ತಲೆಮಾರುಗಳಿಂದ ಭಾರತದ ನಾಗರಿಕರಾಗಿದ್ದಾರೆ. ಅವರ ಮತಗಳಿಂದ ಸರಕಾರಗಳು ರಚನೆಯಾಗುತ್ತಿವೆ. ಈಗ ಅವರನ್ನು ಅನಿಶ್ಚಿತತೆ ಮತ್ತು ಗೊಂದಲಕ್ಕೆ ಕೆಡವಲಾಗುತ್ತಿದೆ'' ಎಂದು ಅವರು ಆರೋಪಿಸಿದರು.

