ಡೊಲೊ: ಭೀಕರ ಬರಗಾಲದಿಂದ ತತ್ತರಿಸಿರುವ ದಕ್ಷಿಣ ಸೋಮಾಲಿಯಾದ ಪರಿಸ್ಥಿತಿ ಇರಾನ್ ಯುದ್ಧದಿಂದ ಮತ್ತಷ್ಟು ಹದಗೆಟ್ಟಿದೆ. ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದ್ದು, ಅಳಲು ಶಕ್ತಿಯಿಲ್ಲದಷ್ಟು ದುರ್ಬಲರಾಗಿದ್ದಾರೆ.
ಸತತ ನಾಲ್ಕು ವರ್ಷದಿಂದ ಮಳೆ ಬಾರದಿದ್ದರಿಂದ ಸೋಮಾಲಿಯಾದ ಬಹುತೇಕ ಭಾಗಗಳಿಗೆ ಬರಗಾಲ ಆವರಿಸಿದೆ. ಬೆಳೆ, ಜಾನುವಾರುಗಳನ್ನು ಕಳೆದುಕೊಂಡ ಜನರು ಎಲ್ಲವನ್ನು ತೊರೆದು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
'ಸೋಮಾಲಿಯಾದಿಂದ ಸುಮಾರು 3 ಸಾವಿರ ಕಿ.ಮೀ ದೂರದಲ್ಲಿ(ಪಶ್ಚಿಮ ಏಷ್ಯಾದಲ್ಲಿ) ಯುದ್ಧ ನಡೆಯುತ್ತಿದ್ದರೂ, ಅದು ಇಲ್ಲಿನ ಜನರನ್ನು ಇನ್ನಷ್ಟು ಕಷ್ಟಕ್ಕೆ ದೂಡಿದೆ' ಎಂದು ಯುನಿಸೆಫ್(UNICEF) ಪರಿಹಾರ ಕಾರ್ಯಕರ್ತರು ತಿಳಿಸಿದ್ದಾರೆ.
'ಯುದ್ಧದಿಂದ ಅಗತ್ಯ ಸಾಮಾಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇಂಧನ ದರಗಳು ಗಗನಕ್ಕೇರುತ್ತಿದೆ. ಇದರಿಂದ ಪರಿಹಾರ ಕಾರ್ಯಗಳಿಗೆ ತೊಡಕಾಗುತ್ತಿದೆ' ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ, ಇಲ್ಲಿನ ಜನರಿಗೆ ಇದ್ಯಾವುದರ ಬಗ್ಗೆಯೂ ಅರಿವಿಲ್ಲ. ಅವರು ಜೀವವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
'ಡೊಲೊ ಪಟ್ಟಣದ ಲಾಡನ್ ನಿರಾಶ್ರಿತ ಶಿಬಿರದಲ್ಲಿ ಮಕ್ಕಳು ಅಳುತ್ತಿದ್ದರೆ ಅದು ತಾಯಂದಿರ ಪಾಲಿಗೆ ಸಂತಸದ ವಿಷಯವಾಗಿದೆ. ಅಪೌಷ್ಟಿಕತೆಯಿಂದ ಮಕ್ಕಳಿಗೆ ಅಳಲು ಶಕ್ತಿ ಇಲ್ಲದಂತಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

