ಸಿಲ್ಚಾರ್: ಜಾಗತಿಕ ಸಂಘರ್ಷಗಳಿಂದ ದೇಶದ ಜನರು ಹೆಚ್ಚು ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ನಿರಂತರ ಶ್ರಮಿಸುತ್ತಿದ್ದರೆ, ವಿರೋಧ ಪಕ್ಷವಾದ ಕಾಂಗ್ರೆಸ್ ದೇಶದ ಜನರಲ್ಲಿ ಭೀತಿ ಹುಟ್ಟಿಸುವ ಮೂಲಕ ಮೂಲಕ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದರು.
ಅಸ್ಸಾಂನ ಸಿಲ್ಚಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ₹23,550 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 'ಕಾಂಗ್ರೆಸ್ ಪಕ್ಷವು ಈಶಾನ್ಯ ರಾಜ್ಯಗಳ ಅಭಿವೃದ್ಧಿಯನ್ನು ದಶಕಗಳಿಂದ ನಿರ್ಲಕ್ಷಿಸಿದೆ' ಎಂದು ದೂರಿದರು.
ಜಗತ್ತಿನಲ್ಲಿ ನಡೆಯುವ ಯುದ್ಧಗಳಿಂದ ದೇಶದ ಮೇಲೆ ಹೆಚ್ಚು ಪರಿಣಾಮ ಆಗದಂತೆ ತಡೆಯುವಲ್ಲಿ ಸರ್ಕಾರ ನಿರತವಾಗಿದೆ. ಆದರೆ ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ವರ್ತಿಸಬೇಕಾದ ಕಾಂಗ್ರೆಸ್, ಆ ನಿಟ್ಟಿನಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಅಸ್ಸಾಂ ಅಥವಾ ದೇಶದ ಅಭಿವೃದ್ಧಿ ಕುರಿತು ಕಾಂಗ್ರೆಸ್ ಬಳಿ ಯಾವುದೇ ದೃಷ್ಟಿಕೋನವಿಲ್ಲ. ಮೋದಿಯನ್ನು ನಿಂದಿಸುವುದು, ಸುಳ್ಳು ಮತ್ತು ವದಂತಿಗಳನ್ನು ಹರಡುವುದು ಮತ್ತು ಜನರನ್ನು ದಾರಿ ತಪ್ಪಿಸುವುದು ಮಾತ್ರ ಅವರಿಗೆ ಗೊತ್ತಿದೆ ಎಂದು ಟೀಕಿಸಿದರು.
ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲೂ ಕಾಂಗ್ರೆಸ್‌ನವರು ಶರ್ಟ್ ಬಿಚ್ಚಿ ಪ್ರತಿಭಟಿಸಿ ದೇಶಕ್ಕೆ ಅಪಖ್ಯಾತಿ ತರಲು ಯತ್ನಿಸಿದರು ಎಂದು ಪ್ರಧಾನಿ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್‌ನ ಈ ಅಸಭ್ಯ ಪ್ರತಿಭಟನೆಯನ್ನು ಇಡೀ ದೇಶ ಖಂಡಿಸಿದೆ. ಆದರೆ ಕಾಂಗ್ರೆಸ್‌ನ 'ರಾಜ ಮನೆತನ' ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. ಕಾಂಗ್ರೆಸ್‌ನವರಿಗೆ ಬಟ್ಟೆ ಹರಿದುಕೊಳ್ಳುವುದನ್ನು ಬಿಟ್ಟು ಬೇರೇನೂ ಬರುವುದಿಲ್ಲ ಎಂದು ಅವರು ದೂರಿದರು.
'ಹತಾಶರಾಗಿರುವ ಕಾಂಗ್ರೆಸ್ ನಾಯಕರು':
ಒಂದರ ನಂತರ ಒಂದರಂತೆ ಚುನಾವಣೆಗಳನ್ನು ಸೋತಿರುವ ಕಾಂಗ್ರೆಸ್, ಮುಂದಿನ ದಿನಗಳಲ್ಲಿ ಶತಮಾನದ ಹಿನ್ನಡೆ ಕಾಣಲಿದೆ. ಇಷ್ಟೆಲ್ಲ ಸೋಲುಗಳ ಹತಾಶೆಯಿಂದ ಅದರ ನಾಯಕರು ದೇಶವನ್ನೇ ದೂಷಿಸುವಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.
ಈಶಾನ್ಯ ಭಾಗವನ್ನು ದೇಶದ ಹೃದಯ ಮತ್ತು ದೆಹಲಿ ಎರಡರಿಂದಲೂ ಕಾಂಗ್ರೆಸ್ ದೂರವಿಟ್ಟಿತ್ತು. ಆ ಮೂಲಕ ಅಭಿವೃದ್ಧಿಯು ಈ ಪ್ರದೇಶದ ಜನರನ್ನು ತಲುಪದಂತೆ ನೋಡಿಕೊಂಡಿತ್ತು ಎಂದು ಅವರು ಹೇಳಿದರು.
ಈಶಾನ್ಯದ ಬರಾಕ್ ಕಣಿವೆಯನ್ನೂ ಕಾಂಗ್ರೆಸ್ ದುರ್ಬಲಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿತು. ದಶಕಗಳ ಕಾಲ ಈ ಭಾಗದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಈ ಪ್ರದೇಶ ಅಭಿವೃದ್ಧಿ ಹೊಂದಿಲ್ಲ ಏಕೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬರಾಕ್ ಕಣವೆಯನ್ನು ಈಶಾನ್ಯ ಮತ್ತು ಪಶ್ಚಿಮ ಬಂಗಾಳದ ಇತರ ಭಾಗಗಳಿಗೆ ಸಂಪರ್ಕಿಸಲು ಬಿಜೆಪಿ ನೇತೃತ್ವದ ಸರ್ಕಾರ ಶ್ರಮಿಸುತ್ತಿದೆ. ಅಲ್ಲದೆ ಇಲ್ಲಿ ದೊಡ್ಡ ಲಾಜಿಸ್ಟಿಕ್ಸ್ ಮತ್ತು ವ್ಯಾಪಾರ ಕೇಂದ್ರ ಅಭಿವೃದ್ದಿಪಡಿಸಲಾಗುವುದು ಎಂದರು.
ಅಸ್ಸಾಂ ಅನ್ನು 10 ವರ್ಷಗಳಿಗೂ ಹೆಚ್ಚು ಕಾಲ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಪ್ರತಿನಿಧಿಸಿದ್ದರು. ಆದರೆ, ರಾಜ್ಯದ ರೈತರಿಗೆ ಅವರು ಒಂದು ಪೈಸೆಯನ್ನೂ ನೀಡಲಿಲ್ಲ. ಬಿಜೆಪಿಯು ಅವರಿಗೆ ₹ 20,000 ಕೋಟಿಗಿಂತ ಹೆಚ್ಚು ನೀಡಿದೆ ಎಂದು ಮೋದಿ ಹೇಳಿದರು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಉಪಸ್ಥಿತರಿದ್ದರು.

