ಕರೂರ್: ಇಲ್ಲಿ ನಡೆದ ಕಾಲ್ತುಳಿತದ ಪ್ರಕರಣದಿಂದ ಚೇತರಿಸಿಕೊಂಡಿರುವ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಜಿಲ್ಲೆಯಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಲು 'ಟಾರ್ಗೆಟ್ ಕರೂರ್' ಹೆಸರಿನಲ್ಲಿ ಜನರನ್ನು ತಲುಪಲು ಮುಂದಾಗಿದೆ.
2025ರ ಸೆಪ್ಟೆಂಬರ್ 27ರಂದು ಕರೂರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಕಾಲ್ತುಳಿತ ಉಂಟಾಗಿ 41 ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ರಾಜ್ಯದ ವಿವಿಧೆಡೆ ಹಾಗೂ ಪುದುಚೇರಿಯಲ್ಲಿ ರ‍್ಯಾಲಿಗಳನ್ನು ನಡೆಸಿದ್ದರು.
ಪಕ್ಷದ ಸಂಸ್ಥಾಪಕ ವಿಜಯ್ ಅವರು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಸಿಬಿಐ ತನಿಖೆಯನ್ನು ಎದುರಿಸುತ್ತಿದ್ದಾರೆ. ತನಿಖಾ ಸಂಸ್ಥೆಯು ವಿಚಾರಣೆಗೆ ಹಾಜರಾಗುವಂತೆ ಮೂರನೇ ಸಲ ಅವರಿಗೆ ಸಮನ್ಸ್ ನೀಡಿದೆ.
ಇದರ ಮಧ್ಯದಲ್ಲೇ, ಮಾರ್ಚ್ 13ರಂದು ಟಿವಿಕೆ ಕರೂರ್ ಜಿಲ್ಲಾ ಘಟಕದ ಕಾರ್ಯದರ್ಶಿ ವಿ.ಪಿ. ಮಥಿಯಾಳಗನ್ ಅವರು ಡಿಎಂಕೆ ಮುಖಂಡ ಹಾಗೂ ಮಾಜಿ ಸಚಿವ ವಿ.ಸೆಂಥಿಲ್ ಬಾಲಾಜಿ ಅವರು ಪ್ರತಿನಿಧಿಸುವ ಕರೂರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೊಡಂಗಿಪಟ್ಟಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು.
ಕಾರ್ಯಕರ್ತರು ಸೀಟಿ ಊದುತ್ತಾ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಚಿಹ್ನೆಯನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. 'ಟಾರ್ಗೆಟ್ ಕರೂರ್' ಹೆಸರಿನಲ್ಲಿ ಪ್ರಚಾರ ನಡೆಸಿ, ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ಕಾರ್ಯತಂತ್ರ ರೂಪಿಸಿದ್ದಾರೆ.
ಚೆನ್ನೈ: ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಜೊತೆಗೆ ಟಿವಿಕೆ ಪಕ್ಷವು ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾಧ್ಯಮಗಳ ವರದಿಗಳನ್ನು ಟಿವಿಕೆ ನಾಯಕರು ತಳ್ಳಿ ಹಾಕಿದ್ದಾರೆ. ಟಿವಿಕೆ ಜೊತೆಗಿನ ಮೈತ್ರಿ ಕುರಿತು ನೇರವಾಗಿ ಉತ್ತರಿಸಲು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ನಿರಾಕರಿಸಿದರು. 'ನೀವು ಮೈತ್ರಿ ಕುರಿತಂತೆ ಚಿಂತೆ ನಡೆಸುತ್ತಿದ್ದೀರಿ. ನಾನು ಜನರ ಸಮಸ್ಯೆಗಳ ಕುರಿತು ಚಿಂತನೆ ನಡೆಸುತ್ತಿದ್ದೇನೆ. ಅದರಲ್ಲೂ ರಾಜ್ಯದಲ್ಲಿ ತಲೆದೋರಿರುವ ಕಾನೂನು-ಸುವ್ಯವಸ್ಥೆ ಹಾಗೂ ಮಹಿಳೆಯರ ಸುರಕ್ಷತೆ ಕುರಿತು ಚಿಂತಿತನಾಗಿದ್ದೇನೆ' ಎಂದು ತಿಳಿಸಿದರು.

