ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯ ತೀವ್ರ ಪ್ರಚಾರದ ನಡುವೆ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯವನ್ನು ಪ್ರಸ್ತಾಪಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಈ ವಿಷಯದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸವಾಲು ಹಾಕಿದರು.
'ಮುಟ್ಟಿನ ವಯಸ್ಸಿನ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸುವ ವಿಷಯದಲ್ಲಿ ಎಡಪಂಥೀಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪಾರಾಗುವಂತಹ ನಿಲುವನ್ನು ವ್ಯಕ್ತಪಡಿಸಿದೆ' ಎಂದು ವೇಣುಗೋಪಾಲ್ ತೀವ್ರವಾಗಿ ಟೀಕಿಸಿದರು.
ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಕೇರಳ ಪುಲಯರ್ ಮಹಾಸಭಾದ ಸಮ್ಮೇಳನವನ್ನು(ಕೆಪಿಎಂಎಸ್) ಉಲ್ಲೇಖಿಸಿದ ಅವರು, 'ಆ ಕಾರ್ಯಕ್ರಮದಲ್ಲಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಪುನ್ನಾಳ ಶ್ರೀಕುಮಾರ್ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಆದರೆ, ಅದೇ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿಯಾಗಲೀ ಅಥವಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಕೆ. ರಾಜನ್ ಆಗಲೀ ತಮ್ಮ ನಿಲುವನ್ನು ಏಕೆ ಸ್ಪಷ್ಟಪಡಿಸಲಿಲ್ಲ' ಎಂದು ಪ್ರಶ್ನಿಸಿದರು.
ವಯನಾಡ್ ಟೌನ್‌ಶಿಪ್ ಯೋಜನೆಯ ವಿವಾದದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಟ ಮಮ್ಮುಟ್ಟಿಯವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದನ್ನೂ ಉಲ್ಲೇಖಿಸಿದ ವೇಣುಗೋಪಾಲ್, 'ಒಬ್ಬ ಖ್ಯಾತ ನಟನಿಗೆ ನೋವಾದಾಗ ಮುಖ್ಯಮಂತ್ರಿ ಕ್ಷಮೆಯಾಚಿಸುತ್ತಾರೆ. ಆದರೆ ದೇವಾಲಯದ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕೆ ಅವರು ಏಕೆ ಕ್ಷಮೆಯಾಚಿಸಲಿಲ್ಲ' ಎಂದು ಕೇಳಿದರು.

