HEALTH TIPS

ಕೊಲ್ಲಿ ಸಂಘರ್ಷದ ಕದನ ವಿರಾಮಕ್ಕೆ ಪಾಕಿಸ್ತಾನದಲ್ಲಿ ಸಭೆ ನಿಗದಿ

ಇಸ್ಲಾಮಾಬಾದ್‌: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಸೌದಿ ಅರೇಬಿಯಾ, ಈಜಿಪ್ಟ್‌ ಮತ್ತು ಟರ್ಕಿಯ ವಿದೇಶಾಂಗ ಸಚಿವರು ಇಸ್ಲಾಮಾಬಾದ್‌ನಲ್ಲಿ ಭಾನುವಾರ ಮತ್ತು ಸೋಮವಾರ ಸಭೆ ನಡೆಸಲಿದ್ದಾರೆ. 

'ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಮಾತ್ರ ಯುದ್ಧವನ್ನು ನಿಲ್ಲಿಸಬಹುದು' ಎಂದಿರುವ ಪಾಕಿಸ್ತಾನ, ಈ ನಿಟ್ಟಿನಲ್ಲಿ 'ವಿಶ್ವಾಸಾರ್ಹ ಮಧ್ಯಸ್ಥಿಕೆದಾರನ ಪಾತ್ರ' ವಹಿಸುವುದಾಗಿ ಹೇಳಿದೆ.

ವಿದೇಶಾಂಗ ಸಚಿವರಾದ ಪಾಕಿಸ್ತಾನದ ಇಶಾಕ್‌ ದಾರ್‌, ಸೌದಿಯ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್, ಟರ್ಕಿಯ ಹಕನ್‌ ಫಿದಾನ್‌, ಈಜಿಪ್ಟ್‌ನ ಬದ್ರ್ ಅಬ್ದಲತಿ ಅವರು ಇರಾನ್‌-ಅಮೆರಿಕ, ಇಸ್ರೇಲ್‌ ನಡುವಿನ ಯುದ್ಧ ಮತ್ತು ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ತೈಲ, ಅನಿಲ ಬಿಕ್ಕಟ್ಟಿನ ಕುರಿತು ಸಮಗ್ರ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಅಮೆರಿಕ ಈಗಾಗಲೇ ಇರಾನ್ ಮುಂದಿಟ್ಟಿರುವ 15 ಅಂಶಗಳ ಕದನ ವಿರಾಮ ಒಪ್ಪಂದ ಮಾತುಕತೆ ಪ್ರಸ್ತಾವದ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

'ಪಾಕಿಸ್ತಾನವು ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಟ್‌ ದೇಶಗಳೊಂದಿಗಿನ ಸಂಬಂಧವನ್ನು ಹೆಚ್ಚು ಗೌರವಿಸುತ್ತದೆ. ಈ ಮಾತುಕತೆಗೆ ವೇದಿಕೆ ಕಲ್ಪಿಸುವ ಮೂಲಕ ಈ ದೇಶಗಳೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಅವಕಾಶವನ್ನೂ ಪಡೆದುಕೊಂಡಿದೆ. ಸಭೆಯ ಬಳಿಕ ವಿದೇಶಾಂಗ ಸಚಿವರು ಪ್ರಧಾನಿ ಶೆಹಬಾಜ್‌ ಶರೀಫ್‌ ಅವರನ್ನೂ ಭೇಟಿಯಾಗಲಿದ್ದಾರೆ' ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಪ್ರಕಟಣೆ ತಿಳಿಸಿದೆ.

ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ಸಭೆಯನ್ನು ಈ ಮೊದಲು ಟರ್ಕಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್‌ ದಾರ್‌ ಮನವಿಯ ಮೇರೆಗೆ ಇಸ್ಲಾಮಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಜಿಯೊ ನ್ಯೂಸ್‌ ವರದಿ ಮಾಡಿದೆ.

ಭಾರತದ ಐವರಿಗೆ ಗಾಯ

  • ಯುಎಇನ ಅಬುಧಾಬಿಯ ಖಲೀಫಾ ಕೈಗಾರಿಕಾ ಪ್ರದೇಶದಲ್ಲಿ ಕ್ಷಿಪಣಿಯ ಅವಶೇಷ ಬಿದ್ದು ಭಾರತದ ಐವರು ಗಾಯಗೊಂಡಿದ್ದಾರೆ.

  • ಒಮಾನ್‌ನ ಸಲಾಲ ಬಂದರಿನಲ್ಲಿದ್ದ ಅಮೆರಿಕದ ಸರಕು ಸಾಗಾಣಿಕೆ ಹಡಗಿನ ಮೇಲೆ ದಾಳಿ ಮಾಡಿರುವುದಾಗಿ ಇರಾನ್‌ ಹೇಳಿದೆ. ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ.

  • ಡ್ರೋನ್‌ ದಾಳಿಯಿಂದ ಕುವೈತ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರೆಡಾರ್‌ ವ್ಯವಸ್ಥೆಗೆ ಹಾನಿಯಾಗಿದೆ.

  • ಅಮೆರಿಕದ ಕಾನ್ಸುಲೇಟ್ ಸಂಕೀರ್ಣ ಇರುವ ಇರಾಕ್‌ನ ಎರ್ಬಿಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸ್ಫೋಟ ವರದಿಯಾಗಿದೆ.

  • ಯುಇಎ ಜತೆಗೆ ರಕ್ಷಣಾ ಸಹಕಾರ ಒಪ್ಪಂದ ಮಾಡಿಕೊಂಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

  • ಹೊರ್ಮುಜ್‌ ಜಲಸಂಧಿಯ ಮೂಲಕ ತೈಲ ಹಡಗುಗಳ ಸಂಚಾರಕ್ಕೆ ಇರಾನ್‌ ಜತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಥಾಯ್ಲೆಂಡ್‌ ಹೇಳಿದೆ.

ಇಸ್ರೇಲ್‌ ದಾಳಿ: 12 ಸಾವು

ಟೆಹರಾನ್‌: ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲ್‌-ಅಮೆರಿಕ ನಡೆಸಿದ ದಾಳಿಯಲ್ಲಿ 12ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಇರಾನ್‌ ಹೇಳಿದೆ. ಪಶ್ಚಿಮ ಲೊರೆಸ್ತಾನ್‌ ಬೊರ್ಜೆಡ್‌ ಪ್ರದೇಶದಲ್ಲಿ ನಡೆದ ವಾಯುದಾಳಿಯಲ್ಲಿ 7 ಮಂದಿ ಮೃತಪಟ್ಟಿದ್ದು 36ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇರಾನ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಮೇಲೂ ದಾಳಿ ನಡೆದಿದ್ದು ಸ್ಫೋಟಗಳು ವರದಿಯಾಗಿವೆ. ದಕ್ಷಿಣ ಲೆಬನಾನ್‌ನ ಪಟ್ಟಣಗಳು ಮತ್ತು ಗ್ರಾಮಗಳ ಮೇಲೆ ಇಸ್ರೇಲ್‌ ದಾಳಿ ಮುಂದುವರಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries