ಕಾಠ್ಮಂಡು: ಕಳೆದ ವರ್ಷ ನೇಪಾಳದಲ್ಲಿ ನಡೆದಿದ್ದ ಜೆನ್-ಝಿ ಪ್ರತಿಭಟನೆಯನ್ನು ಹತ್ತಿಕ್ಕಿ, 76 ಮಂದಿಯ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರನ್ನು ಶನಿವಾರ ಬೆಳಗಿನ ಜಾವ ಬಂಧಿಸಲಾಗಿದೆ.
ಪ್ರತಿಭಟನೆ ಮತ್ತು ಅದರ ಸುತ್ತಲಿನ ಘಟನಾವಳಿ ಸಂಬಂಧ ತನಿಖೆ ನಡೆಸಲು ತನಿಖಾ ತಂಡವೊಂದನ್ನು ರಚಿಸಲಾಗಿತ್ತು.
ಈ ತಂಡವು ಇತ್ತೀಚೆಗೆ ವರದಿ ನೀಡಿತ್ತು. ಶುಕ್ರವಾರವಷ್ಟೇ ರಚನೆಯಾದ ಹೊಸ ಸರ್ಕಾರವು ತನಿಖಾ ತಂಡದ ಶಿಫಾರಸನ್ನು ಜಾರಿ ಮಾಡಿದೆ. ಈ ಬಗ್ಗೆ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ.
ಅಂದಿನ ಗೃಹ ಸಚಿವ, ನೇಪಾಳಿ ಕಾಂಗ್ರೆಸ್ ಪಕ್ಷದ ನಾಯಕ ರಮೇಶ್ ಲೇಖಾ ಅವರನ್ನೂ ಇದೇ ಪ್ರಕರಣದ ಸಂಬಂಧ ಬಂಧಿಸಲಾಗಿದೆ. 'ಒಲಿ ಮತ್ತು ರಮೇಶ್ ಸೇರಿ ಕೆಲವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ, ಮೂರರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬೇಕು' ಎಂದು ತನಿಖಾ ತಂಡ ಶಿಫಾರಸು ಮಾಡಿತ್ತು.
ಬಂಧನಕ್ಕೆ ವಿರೋಧ: ಸಿಪಿಎನ್-ಯುಎಂಎಲ್ ಪಕ್ಷದ ಮುಖ್ಯಸ್ಥರಾದ ಒಲಿ ಅವರ ಬಂಧನವನ್ನು ಪಕ್ಷ ವಿರೋಧಿಸಿದ್ದು, ಇದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದೆ. ಜೊತೆಗೆ, 77 ಜಿಲ್ಲೆಗಳಲ್ಲಿನ ಮುಖ್ಯ ಅಧಿಕಾರಿಗಳಿಗೆ ಭಾನುವಾರ ಪತ್ರ ನೀಡಿ, ಬಂಧನವನ್ನು ವಿರೋಧಿಸಲಾಗುವುದು ಎಂದೂ ಪಕ್ಷ ಘೋಷಿಸಿದೆ.
ವೈದ್ಯಕೀಯ ತಪಾಸಣೆ: 'ಬಂಧನದ ಬಳಿಕ ಒಲಿ ಅವರನ್ನು ತ್ರಿಭುವನ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಕೊಂಡೊಯ್ಯಲಾಯಿತು. ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆ ಇರುವುದರಿಂದ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು' ಎಂದು ಪೊಲೀಸರು ತಿಳಿಸಿದರು.
ಸುಧಾನ್ ಗುರಂಗ್, ಗೃಹ ಸಚಿವಕಾನೂನಿಗಿಂತ ಯಾರೂ ಮಿಗಿಲಲ್ಲ. ಇದು ಸೇಡಿನ ರಾಜಕಾರಣವಲ್ಲ. ನ್ಯಾಯದಾನದ ಆರಂಭವಷ್ಟೆ. ದೇಶವು ಹೊಸ ದಿಕ್ಕಿನಲ್ಲಿ ಸಾಗುತ್ತಿದೆ

