ಕೊಚ್ಚಿ: ಯುಡಿಎಫ್ ಅಧ್ಯಕ್ಷ ವಿ.ಡಿ. ಸತೀಶನ್ ಅವರು 2001 ಮತ್ತು 2006ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಆರ್‌ಎಸ್‌ಎಸ್ ಬೆಂಬಲವನ್ನು ಕೋರಿದ್ದರು ಎಂದು ಸಂಘ ಪರಿವಾರದ ಪ್ರಮುಖ ನಾಯಕ ಆರ್.ವಿ. ಬಾಬು ಶನಿವಾರ ಆರೋಪಿಸಿದ್ದಾರೆ.
ಆದರೆ, ಬಾಬು ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ವಿ.ಡಿ.ಸತೀಶನ್ ತಿರಸ್ಕರಿಸಿದ್ದು, ' ನಾನು ಎಂದಿಗೂ ಆರ್‌ಎಸ್‌ಎಸ್ ಅಥವಾ ಬಿಜೆಪಿಯ ವೋಟುಗಳನ್ನು ಕೇಳಿಲ್ಲ' ಎಂದಿದ್ದಾರೆ.
ಆರ್‌ಎಸ್‌ಎಸ್ ಪರ ಸಂಘಟನೆಯಾಗಿರುವ 'ಹಿಂದೂ ಐಕ್ಯ ವೇದಿ' ರಾಜ್ಯ ಘಟಕದ ಅಧ್ಯಕ್ಷರಾಗಿರುವ ಬಾಬು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, 'ಸಿಪಿಐ ನಾಯಕ ರಾಜು ಅವರ ಎದುರು 1996ರಲ್ಲಿ ಸತೀಶನ್ ಹೀನಾಯವಾಗಿ ಸೋತಿದ್ದರು. ಆ ಬಳಿಕ ಚುನಾವಣೆಯಲ್ಲಿ ಗೆಲ್ಲಲು ಆರ್‌ಎಸ್‌ಎಸ್ ಬೆಂಬಲ ಕೋರಿದ್ದರು' ಎಂದಿದ್ದಾರೆ.
ಜತೆಗೆ '2006ರಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ತಾನು ಭಾಗಿಯಾಗಿರಲಿಲ್ಲ ಎಂದೇ ಸತೀಶನ್ ಈ ಹಿಂದೆ ವಾದಿಸಿದ್ದರು. ಆದರೆ, ಈಗ ಭಾಗಿಯಾಗಿದ್ದೆ ಎಂಬುದನ್ನು ಒಪ‍್ಪಿಕೊಂಡಿದ್ದಾರೆ. ಹಾಗೆಯೇ ಮುಂದೆ ಒಂದು ದಿನ ತಾನು ಆರ್‌ಎಸ್‌ಎಸ್ ಬೆಂಬಲ ಕೋರಿದ್ದೆ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ' ಎಂದೂ ಬಾಬು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸತೀಶನ್, ಬಾಬು ಅವರು ನಾನು ಸೋಲಬೇಕೆಂದು ಬಯಸುತ್ತಿದ್ದಾರೆ. ಬಿಜೆಪಿ ಅಥವಾ ಆರ್‌ಎಸ್‌ಎಸ್ ಜೊತೆ ಯಾವುದೇ ಒಪ್ಪಂದವಾಗಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. 2001 ಮತ್ತು 2006ರ ಚುನಾವಣೆಯಲ್ಲಿ ನಾನು ಆರ್‌ಎಸ್‌ಎಸ್ ಬೆಂಬಲ ಕೋರಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

