ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್ ಹಾಗೂ ಸಂದೀಪ್ ಮೇಹ್ತಾ ಅವರ ಪೀಠ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯಲ್ಲಿರುವ ಮಹಿಳಾ ಜೈಲುಗಳ ಸಂಖ್ಯೆ, ಅವುಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ವಿವರಗಳನ್ನು ಒದಗಿಸುವಂತೆ ಕೇಳಿದೆ. ಮಹಿಳಾ ಕೈದಿಗಳೊಂದಿಗೆ ವಾಸಿಸುವ ಮಕ್ಕಳ ಶಿಕ್ಷಣ ಮತ್ತು ಒಟ್ಟಾರೆ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಮಾಹಿತಿಯನ್ನು ಪೀಠ ಕೋರಿದೆ.
ಜೈಲುಗಳಲ್ಲಿನ ಅಮಾನವೀಯ ಪರಿಸ್ಥಿತಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ಗೌರವ್ ಅಗರ್ವಾಲ್ ಆಯಮಿಕಸ್ ಕ್ಯೂರಿಯಾಗಿ ನ್ಯಾಯಾಲಯಕ್ಕೆ ನೆರವು ನೀಡುತ್ತಿದ್ದಾರೆ ಎಂದು ಪೀಠ ಗಮನ ಸೆಳೆಯಿತು. ಅಲ್ಲದೆ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿದ ಅಂಕಿ-ಅಂಶಗಳು 2023 ವರ್ಷಕ್ಕೆ ಸಂಬಂಧಿಸಿದೆ ಎಂದು ತಿಳಿಸಿತು.
ಈ ಪ್ರಕರಣ ಪ್ರಮುಖ ಮತ್ತು ಗಂಭೀರ ಸಮಸ್ಯೆಗಳನ್ನು ಒಳಗೊಂಡಿದೆ. ಸೂಕ್ತ ತೀರ್ಪಿಗೆ ಸರಿಯಾದ ಮತ್ತು ವಿವರವಾದ ಮಾಹಿತಿಯ ಅಗತ್ಯವಿದೆ. ಇದಕ್ಕೆ ಪರಿಷ್ಕೃತ ಹಾಗೂ ಪ್ರಸಕ್ತ ಮಾಹಿತಿ ತುಂಬಾ ಮುಖ್ಯ. ಅಂತಹ ಮಾಹಿತಿಗಳಿಲ್ಲದ ಪ್ರಕರಣವನ್ನು ಪರಿಣಾಮಕಾರಿಯಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಆದುದರಿಂದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ತಮ್ಮ ಪ್ರದೇಶಗಳಲ್ಲಿರುವ ಜೈಲುಗಳ ಬಗ್ಗೆ ಪರಿಷ್ಕೃತ ಹಾಗೂ ಸಂಪೂರ್ಣ ದತ್ತಾಂಶವನ್ನು ಸಲ್ಲಿಸುವಂತೆ ನಿರ್ದೇಶಿಸುವುದು ಸೂಕ್ತ ಎಂದು ಮಾರ್ಚ್ 17ರಂದು ನೀಡಿ ತನ್ನ ಆದೇಶದಲ್ಲಿ ಪೀಠ ಹೇಳಿದೆ.

