ಕಾಸರಗೋಡು: ಚೆರ್ಕಳ ರಾಷ್ಟ್ರೀಯ ಹೆದ್ದಾರಿ ಸನಿಹದ ಹೊಂಡದಲ್ಲಿ ಕಾರ್ಮಿಕರೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕೊಪ್ಪಳ ನಿವಾಸಿ ದೇವಪ್ಪ(52)ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಇವರ ಕೊಪ್ಪಳದ ಮನೆಯವರೊಂದಿಗೆ ಮೊಬೈಲಲ್ಲಿ ಮಾತಾಡಿದ್ದು, ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮುಖ ಹಾಗೂ ತಲೆಗೆ ಗಂಭೀರ ಗಾಯ ಕಂಡುಬಂದಿದ್ದು, ಹೆದ್ದಾರಿ ಮೇಲಿಂದ ಬಿದ್ದು ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹ ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ.
ಚೆರ್ಕಳದ ಬಾಡಿಗೆ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದ ದೇವಪ್ಪ ಅವರು ಕಳೆದ ಹಲವು ವರ್ಷಗಳಿಮದ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದರು. ಮಾ 10ರಂದು ಗದಗಜಿಲ್ಲೆ ಬಲೇಶ್ವರ ಬಾಲಹೊಸೂರ್ ನಿವಾಸಿ ಚಂದ್ರಶೇಖರ್ ಸುರೇಶ್ ಎಂಬವರ ಮೃತದೇಹ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಚೆರ್ಕಳ ಆಸುಪಾಸು ಈ ಹಿಂದೆ ಹಲವಾರು ಮಂದಿ ಕರ್ನಾಟಕ ನಿವಾಸಿಗಳಾದ ಕೂಲಿಕಾರ್ಮಿಕರು ನಿಗೂಢವಾಗಿ ಸಾವಿಗೀಡಾಗಿದ್ದು, ಸಂಶಯಗಳಿಗೆ ಕಾರಣವಾಗಿದೆ.

