HEALTH TIPS

ಇಂಧನ ಮೂಲಸೌಕರ್ಯಗಳ ನಾಶಮಾಡುವ ಟ್ರಂಪ್ ಬೆದರಿಕೆಗೆ ತಕ್ಕ ಪ್ರತ್ಯುತ್ತರ: ಇರಾನ್‌

 ಕೈರೊ/ಟೆಹರಾನ್‌: ತೈಲ ಹೊತ್ತ ಹಡಗುಗಳ ಸಂಚಾರಕ್ಕೆ ಹೊರ್ಮುಜ್‌ ಜಲಸಂಧಿಯನ್ನು 48 ಗಂಟೆ ಒಳಗಾಗಿ ಮುಕ್ತಗೊಳಿಸದಿದ್ದಲ್ಲಿ ಇರಾನ್‌ನಲ್ಲಿನ ಎಲ್ಲ ವಿದ್ಯುತ್‌ ಸ್ಥಾವರಗಳನ್ನು ನಾಶ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. 


ಟ್ರಂಪ್‌ ಮಾತಿಗೆ ತಿರುಗೇಟು ನೀಡಿರುವ ಇರಾನ್‌, 'ಟ್ರಂಪ್‌ ತಾನು ಹೇಳಿದಂತೆ ದೇಶದಲ್ಲಿನ ವಿದ್ಯುತ್‌ ಸ್ಥಾವರಗಳನ್ನು ನಾಶ ಮಾಡಿದಲ್ಲಿ, ಇಂಧನ ಘಟಕಗಳು ಸೇರಿ ಕೊಲ್ಲಿ ರಾಷ್ಟ್ರಗಳಲ್ಲಿನ ಅಮೆರಿಕದ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತೇವೆ' ಎಂದು ಭಾನುವಾರ ತಿರುಗೇಟು ನೀಡಿದೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧಕ್ಕೆ ಶೀಘ್ರವೇ ಅಂತ್ಯ ಹಾಡುವುದಾಗಿ ಶನಿವಾರವಷ್ಟೆ ಹೇಳಿದ್ದ ಟ್ರಂಪ್‌, ಈಗ ಇರಾನ್‌ ಮೇಲಿನ ದಾಳಿಗಳನ್ನು ಹೆಚ್ಚಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಇರಾನ್ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಹೀಗಾಗಿ, ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮತ್ತಷ್ಟು ಭೀಕರವಾಗುವ ಸೂಚನೆಯನ್ನು ಈ ಬೆಳವಣಿಗೆ ನೀಡಿದಂತಾಗಿದೆ.

ಈ ಬೆಳವಣಿಗೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ತಲ್ಲಣ ಕಂಡು ಬರಲಿದೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

'48 ಗಂಟೆಗಳ ಒಳಗಾಗಿ ಹೊರ್ಮುಜ್‌ ಜಲಮಾರ್ಗವನ್ನು ಮುಕ್ತಗೊಳಿಸದಿದ್ದಲ್ಲಿ ಇರಾನ್‌ನ ಅತಿದೊಡ್ಡ ವಿದ್ಯುತ್‌ ಸ್ಥಾವರದಿಂದ ಆರಂಭಿಸಿ ಎಲ್ಲ ಸ್ಥಾವರಗಳನ್ನು ನಾಶ ಮಾಡಲಾಗುವುದು' ಎಂದು ಫ್ಲಾರಿಡಾದ ತಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಿರುವ ಟ್ರಂಪ್‌, ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಟ್ರಂಪ್‌ ಅವರ ಈ ಬೆದರಿಕೆ ನಡುವೆಯೇ ಅಮೆರಿಕದ ಯುದ್ಧನೌಕೆಗಳು ಹಾಗೂ ಯುದ್ಧವಿಮಾನಗಳು ಕೊಲ್ಲಿಯತ್ತ ಸಾಗುತ್ತಿರುವುದು ಕಂಡುಬಂದಿದೆ.

ಇಸ್ರೇಲ್‌ ಮೇಲೆ ದಾಳಿ:

ದಕ್ಷಿಣ ಭಾಗದಲ್ಲಿರುವ ದಿಮೋನಾ ಹಾಗೂ ಅರಾದ್‌ ನಗರಗಳ ಮೇಲೆ ಇರಾನ್‌ ಉಡಾಯಿಸಿದ್ದ ಕ್ಷಿಪಣಿಗಳನ್ನು ಹೊಡೆದುರುಳಿಸಲು ಸಾಧ್ಯವಾಗಲಿಲ್ಲ ಎಂದು ಇಸ್ರೇಲ್‌ ಹೇಳಿದೆ.

ಇಸ್ರೇಲ್‌ನ ನೆಗೆವ್‌ ಮ‌ರುಭೂಮಿಯಲ್ಲಿರುವ ಅಣು ಸ್ಥಾವರಕ್ಕೆ ಸನಿಹದಲ್ಲಿ ಈ ನಗರಗಳಿವೆ. ಇದೇ ಮೊದಲ ಬಾರಿಗೆ ಇರಾನ್‌ನ ಕ್ಷಿಪಣಿಗಳು ಇಸ್ರೇಲ್‌ನ ವಾಯಪ್ರದೇಶವನ್ನು ಭೇದಿಸಿ, ಗುರಿಯತ್ತ ನುಗ್ಗಿವೆ. ಹೀಗಾಗಿ, ಹಲವು ನಗರಗಳಲ್ಲಿ ಸೈರನ್‌ಗಳನ್ನು ಮೊಳಗಿಸಿ, ಸುರಕ್ಷಿತ ಜಾಗಗಳಿಗೆ ತೆರಳುವಂತೆ ಜನರಿಗೆ ಸೂಚನೆ ನೀಡಲಾಗಿತ್ತು.

'ಇರಾನ್‌ ಕ್ಷಿಪಣಿಗಳ ದಾಳಿಯಿಂದಾಗಿ 10 ಅಪಾರ್ಟ್‌ಮೆಂಟ್‌ಗಳಿಗೆ ಧಕ್ಕೆ ಉಂಟಾಗಿದೆ. ಈ ಪೈಕಿ, ಮೂರು ಕಟ್ಟಡಗಳಿಗೆ ಭಾರಿ ಹಾನಿಯಾಗಿದ್ದು, ಅವುಗಳು ಯಾವುದೇ ಸಮಯದಲ್ಲಿ ಕುಸಿಯಬಹುದು' ಎಂದು ರಕ್ಷಣಾ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿ ಹೇಳಿದ್ದಾರೆ.

'ದಕ್ಷಿಣ ಇಸ್ರೇಲ್‌ನ ದಿಮೋನಾ ಹಾಗೂ ಅರಾದ್‌ ಪಟ್ಟಣಗಳ ಮೇಲೆ ಶನಿವಾರ ಇರಾನ್‌ ಕ್ಷಿಪಣಿ ದಾಳಿ ನಡೆಸಿದ್ದು, 175 ಮಂದಿ ಗಾಯಗೊಂಡಿದ್ದಾರೆ' ಎಂದು ಇಸ್ರೇಲ್‌ ಸೇನೆಯ ವಕ್ತಾರ ಲೆಫ್ಟಿನೆಂಟ್‌ ಕರ್ನಲ್‌ ನಡಾವ್‌ ಶೋಶಾನಿ ತಿಳಿಸಿದ್ದಾರೆ.

ಇರಾನ್‌ನ ನಟಾನ್ಜ್ ಅಣು ಸ್ಥಾವರವನ್ನು ಗುರಿಯಾಗಿಸಿ ಶನಿವಾರ ದಾಳಿ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ, ಇಸ್ರೇಲ್‌ನ ಅಣುಸ್ಥಾವರ ಗುರಿಯಾಗಿಸಿ ದಾಳಿ ಮಾಡಿದ್ದಾಗಿ ಇರಾನ್‌ ಹೇಳಿದೆ. ನಟಾನ್ಜ್‌ ಅಣು ಘಟಕದ ಮೇಲಿನ ದಾಳಿಗೆ ತಾನು ಹೊಣೆಯಲ್ಲ ಎಂದು ಇಸ್ರೇಲ್‌ ಹೇಳಿತ್ತು.

'ಭಾರಿ ರಕ್ಷಣೆ ಹೊಂದಿರುವ ದಿಮೋನಾ ಪ್ರದೇಶದತ್ತ ಹಾರಿಸಿದ್ದ ಕ್ಷಿಪಣಿಗಳನ್ನು ತಡೆಯಲು ಇಸ್ರೇಲ್‌ಗೆ ಸಾಧ್ಯವಾಗಿಲ್ಲ. ನಾವು ಯುದ್ಧದ ಹೊಸ ಹಂತ ಪ್ರವೇಶಿಸಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ' ಎಂದು ಇರಾನ್‌ ಸಂಸತ್‌ನ ಸ್ಪೀಕರ್ ಮೊಹಮ್ಮದ್‌ ಬಘೇರ್ ಗಾಲಿಬಾಫ್‌ 'ಎಕ್ಸ್‌'ನಲ್ಲಿ ಬರೆದುಕೊಂಡಿದ್ದಾರೆ.

'ಪಶ್ಚಿಮ ಏಷ್ಯಾದಲ್ಲಿರುವ ಪ್ರಮುಖ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು. ದುರಸ್ತಿಪಡಿಸಲಾಗದಷ್ಟು ಅವುಗಳನ್ನು ನಾಶ ಮಾಡಲಾಗುವುದು' ಎಂದೂ ಅವರು ಹೇಳಿದ್ದಾರೆ.

'ಶೇ 59ರಷ್ಟು ಅಮೆರಿಕನ್ನರಿಗೆ ಒಪ್ಪಿಗೆ ಇಲ್ಲ'

ಪ್ರಮುಖ ಅಂಶಗಳು

ಜೆರುಸಲೇಂನ ಹಲವೆಡೆ ಭಾನುವಾರ ಬೆಳಿಗ್ಗೆ ಭಾರಿ ಸ್ಫೋಟಗಳು ಸಂಭವಿಸಿವೆ. ಇಸ್ರೇಲ್‌ನತ್ತ ಇರಾನ್‌ ಹಲವು ಕ್ಷಿಪಣಿಗಳಿಂದ ದಾಳಿ ಮಾಡಿದೆ

ಟೆಹರಾನ್‌ ಮೇಲೆ ಭಾನುವಾರವೂ ಇಸ್ರೇಲ್‌ ದಾಳಿ ನಡೆಸಿದೆ

ರಾಜಧಾನಿ ರಿಯಾದ್‌ ಗುರಿಯಾಗಿಸಿ ಇರಾನ್‌ ಮೂರು ಕ್ಷಿಪಣಿಗಳಿಂದ ದಾಳಿ ನಡೆಸಿತ್ತು. ಈ ಪೈಕಿ ಒಂದು ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ. ಉಳಿದೆರಡು ಕ್ಷಿಪಣಿಗಳು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಬಿದ್ದಿವೆ ಎಂದು ಸೌದಿ ಅರೇಬಿಯಾ ಹೇಳಿದೆ

ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಯುಎಇ ಹೇಳಿದೆ

ಇಸ್ರೇಲ್‌ನ ಉತ್ತರ ಭಾಗದಲ್ಲಿ ಇಸ್ರೇಲ್‌ ಸೈನಿಕರ ಮೇಲೆ ದಾಳಿ ನಡೆಸಿದ್ದಾಗಿ ಲೆಬನಾನ್‌ನಲ್ಲಿರುವ ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರ ಗುಂಪು ಹೇಳಿದೆ

ಈ ಯುದ್ಧದಿಂದಾಗಿ ಸಂಭವಿಸಿರುವ ಸಾವುಗಳು ಜನರು ನೋವು ಅನುಭವಿಸುವಂತಾಗಿರುವುದು ಇಡೀ ಮನುಕುಲಕ್ಕೇ ಕಳಂಕವಾಗಿದೆ ಪೋಪ್‌ ಲಿಯೊ-14 ಡೊನಾಲ್ಡ್‌ ಟ್ರಂಪ್‌ ವಿಧಿಸಿರುವ '48 ಗಂಟೆಗಳ ಗಡುವು' ಎಂಬ 'ಟೈಮ್‌ ಬಾಂಬ್‌'ನಿಂದಾಗಿ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಕಂಡುಬರುವ ಸಾಧ್ಯತೆ ಇದೆ. ಇದು ಷೇರು ಮಾರುಕಟ್ಟೆ ಮೇಲೆ ಭಾರಿ ಪರಿಣಾಮ ಉಂಟು ಮಾಡಲಿದೆ ಟೋನಿ ಸಿಕಮೋರ್ ಮಾರುಕಟ್ಟೆ ವಿಶ್ಲೇಷಕ ಇರಾನ್‌ನ ಇಂಧನ ಮತ್ತು ವಿದ್ಯುತ್‌ ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ಮಾಡಿದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕ ಹೊಂದಿರುವ ಇಂಧನ ಮಾಹಿತಿ ತಂತ್ರಜ್ಞಾನ ಹಾಗೂ ನಿರ್ಲವಣೀಕರಣ ಘಟಕಗಳ ಮೇಲೆ ದಾಳಿ ನಿಶ್ಚಿತ-ಇರಾನ್‌ನ ಖತಮ್ ಅಲ್‌-ಅನ್‌ಬಿಯಾ ಮಿಲಿಟರಿ ಕಮಾಂಡ್ಈ ಯುದ್ಧವನ್ನು ಕೂಡಲೇ ನಿಲ್ಲಿಸಬೇಕು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries