ಟೆಹ್ರಾನ್: ಇರಾನ್ ನಲ್ಲಿ ಸರ್ವೋಚ್ಚ ನಾಯಕತ್ವಕ್ಕೆ ಸಂಬಂಧಿತ ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ, ಗಾರ್ಡಿಯನ್ ಕೌನ್ಸಿಲ್‌ನ ಪ್ರಭಾವಿ ಧರ್ಮಗುರು ಅಲಿರೆಝಾ ಅರಾಫಿ ಅವರನ್ನು ತಾತ್ಕಾಲಿಕ ನಾಯಕತ್ವ ಮಂಡಳಿಗೆ ನೇಮಿಸಲಾಗಿದೆ. ತಜ್ಞರ ಸಭೆ ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ, ಸರ್ವೋಚ್ಚ ನಾಯಕನ ಸಂವಿಧಾನಾತ್ಮಕ ಕರ್ತವ್ಯಗಳನ್ನು ಈ ಮೂವರು ಸದಸ್ಯರ ಮಂಡಳಿ ನಿರ್ವಹಿಸಲಿದೆ ಎಂದು Aljazeera ವರದಿ ಮಾಡಿದೆ.
67 ವರ್ಷದ ಅರಾಫಿ ಅವರು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಘೋಲಾಮ್-ಹೊಸೇನ್ ಮೊಹ್ಸೆನಿ-ಎಜೇಯ್ ಅವರೊಂದಿಗೆ ತಾತ್ಕಾಲಿಕ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಂವಿಧಾನದಲ್ಲಿ ನಿಗದಿಪಡಿಸಿದ ಪ್ರಕ್ರಿಯೆಯಂತೆ, ಹೊಸ ಸರ್ವೋಚ್ಚ ನಾಯಕನ ಆಯ್ಕೆ ಪೂರ್ಣಗೊಳ್ಳುವವರೆಗೆ ಆಡಳಿತದ ನಿರಂತರತೆಯನ್ನು ಕಾಪಾಡುವುದು ಈ ಮಂಡಳಿಯ ಹೊಣೆಗಾರಿಕೆಯಾಗಿದೆ.
ಅರಾಫಿ ಅವರು ಗಾರ್ಡಿಯನ್ ಕೌನ್ಸಿಲ್‌ನ ಸದಸ್ಯರಾಗಿರುವುದರ ಜೊತೆಗೆ, ಪ್ರಭಾವಿ ಮಧ್ಯಸ್ಥಿಕೆ ಸಂಸ್ಥೆಯಾದ ಎಕ್ಸ್ಪೆಡಿಯೆನ್ಸಿ ಕೌನ್ಸಿಲ್‌ನಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ.
ಇದರೊಂದಿಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಭದ್ರತಾ ವಲಯದ ಒಳಸಮೀಕರಣಗಳೂ ಮಹತ್ವ ಪಡೆದಿವೆ. ಭದ್ರತಾ ವ್ಯವಸ್ಥೆಯಲ್ಲಿ ಪ್ರಭಾವಿ ಸ್ಥಾನ ಹೊಂದಿರುವ ಅಲಿ ಲಾರಿಜಾನಿ ಮುಂದಿನ ರಾಜಕೀಯ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಅಧಿಕಾರದ ನಿಜವಾದ ಸಮತೋಲನ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಸಂದರ್ಭದಲ್ಲಿ, IRGCನ ಕಮಾಂಡರ್-ಇನ್-ಚೀಫ್ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಹತ್ಯೆಗೀಡಾಗಿರುವುದು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಆತಂಕ ಸೃಷ್ಟಿಸಿದೆ. ಮಿಲಿಟರಿ ಹಾಗೂ ಆರ್ಥಿಕವಾಗಿ ಪ್ರಭಾವಿ ಶಕ್ತಿಯಾಗಿರುವ ಈ ಪಡೆಯ ಮುಂದಿನ ನಾಯಕನ ಹೆಸರು ಇನ್ನೂ ಪ್ರಕಟವಾಗಿಲ್ಲ.
IRGCಗೆ ಸಂಬಂಧಿಸಿದ ಟೆಲಿಗ್ರಾಮ್ ಚಾನೆಲ್‌ಗಳ ಪ್ರಕಾರ, ಎರಡು ತಿಂಗಳ ಹಿಂದೆ ಖಾಮಿನೈ ನೇಮಕ ಮಾಡಿದ್ದ ಉಪ ಮುಖ್ಯಸ್ಥ ಅಹ್ಮದ್ ವಾಹಿದಿ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ಪರಿಗಣಿಸಲಾಗುತ್ತಿದೆ. ಆದರೆ ಈ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಿದೆ.

