ಇರಾನ್ ನ ಕ್ಷಿಪಣಿ ಸಾಮರ್ಥ್ಯ ಕುಸಿದು, ನೌಕಾಪಡೆ ನಿಷ್ಪರಿಣಾಮಗೊಂಡಿರುವುದರಿಂದ, ಇರಾನ್ ಇನ್ನು ಮುಂದೆ ಯುದ್ಧದಲ್ಲಿ ತೊಡಗಿಸಿಕೊಳ್ಳುವ ಸಾಧನಗಳನ್ನು ಹೊಂದಿಲ್ಲ. ಇದರ ಪರಿಣಾಮವಾಗಿ ಇರಾನ್ ಪ್ರದೇಶದ ಮೇಲೆ ಸಂಪೂರ್ಣ ವೈಮಾನಿಕ ಪ್ರಾಬಲ್ಯ ಉಂಟಾಗುತ್ತದೆ.
ಫೆಬ್ರವರಿ 28 ರಂದು ಇಸ್ರೇಲ್ ಮತ್ತು ಯುಎಸ್ ಪ್ರಾರಂಭಿಸಿದ ಯುದ್ಧವನ್ನು ಉಲ್ಲೇಖಿಸಿ 'ಆಪರೇಷನ್ ಎಪಿಕ್ ಫ್ಯೂರಿ' ದೊಡ್ಡ ಮಟ್ಟದ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಶ್ವೇತಭವನ ಶನಿವಾರ ಹೇಳಿದೆ.
ರವಿವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಸ್ ಪಡೆಗಳು ಇರಾನ್ ನ ಡ್ರೋನ್ ಉತ್ಪಾದನಾ ಸಾಮರ್ಥ್ಯವನ್ನು ನಾಶಮಾಡಿವೆ ಎಂದಿದ್ದರು. ಸೋಮವಾರ ಮಧ್ಯಾಹ್ನ ಖತರ್, ಇರಾನ್ನಿಂದ ದೇಶದ ಕಡೆಗೆ ಹಾರಿಸಲಾದ ಕ್ಷಿಪಣಿಗಳನ್ನು ತಡೆಹಿಡಿದಿರುವುದಾಗಿ ಘೋಷಿಸಿತು. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹರೇನ್ ಸಹ ಎಚ್ಚರಿಕೆಗಳನ್ನು ನೀಡಿವೆ. ಅಬುಧಾಬಿಯಲ್ಲಿ ಕ್ಷಿಪಣಿಯೊಂದು ಕಾರಿನ ಮೇಲೆ ಬಿದ್ದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.
►ಇರಾನ್ ನಲ್ಲಿ ಕ್ಷಿಪಣಿ ಕಡಿಮೆಯಾಗಿದೆಯೇ?
ವಾಸ್ತವವಾಗಿ, ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಗಲ್ಫ್ ರಾಷ್ಟ್ರಗಳು, ಇಸ್ರೇಲ್ ಮತ್ತು ಈ ಪ್ರದೇಶದ ಇತರ ರಾಷ್ಟ್ರಗಳ ಮೇಲೆ ಹಾರಿಸಿರುವ ಪ್ರತೀಕಾರದ ಕ್ಷಿಪಣಿಗಳು ಮತ್ತು ಡ್ರೋನ್ ಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ. ಉದಾಹರಣೆಗೆ, ಸಂಘರ್ಷದ ಮೊದಲ 24 ಗಂಟೆಗಳಲ್ಲಿ ಇರಾನ್ ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ 167 ಕ್ಷಿಪಣಿಗಳು (ಬ್ಯಾಲಿಸ್ಟಿಕ್ ಮತ್ತು ಕ್ರೂಸ್) ಮತ್ತು 541 ಡ್ರೋನ್ ಗಳನ್ನು ಹಾರಿಸಿದೆ.
ಇದಕ್ಕೆ ವಿರುದ್ಧವಾಗಿ, ಸಂಘರ್ಷದ 15ನೇ ದಿನದಂದು ಅದು ನಾಲ್ಕು ಕ್ಷಿಪಣಿಗಳು ಮತ್ತು ಆರು ಡ್ರೋನ್ ಗಳನ್ನು ಮಾತ್ರ ಹಾರಿಸಿದೆ ಎಂದು ಎಮಿರೇಟ್ನ ರಕ್ಷಣಾ ಸಚಿವಾಲಯ ಹೇಳಿರುವುದಾಗಿ ALJAZEERA ವರದಿ ಮಾಡಿದೆ.
ಇಸ್ರೇಲ್ ವಿರುದ್ಧದ ದಾಳಿಯೂ ಕಡಿಮೆಯಾಗಿದೆ. ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಅಧ್ಯಯನ ಸಂಸ್ಥೆ (INSS) ದತ್ತಾಂಶವು ಉಡಾವಣಾ ಪ್ರಮಾಣದಲ್ಲಿ ತೀವ್ರ ಕುಸಿತವನ್ನು ತೋರಿಸುತ್ತದೆ. ಆರಂಭಿಕ ದಿನಗಳಲ್ಲಿ ಸರಾಸರಿ 100 ಸ್ಫೋಟಕಗಳನ್ನು ಉಡಾಯಿಸಿದ್ದರೂ, ಈಗ ದೈನಂದಿನ ದಾಳಿಯು ಒಂದಂಕಿಗೆ ಇಳಿದಿದೆ.
ಕಳೆದ ವಾರ ಯುದ್ಧದ ಮೊದಲ ದಿನದಿಂದ ಕ್ಷಿಪಣಿ ಉಡಾವಣೆಗಳು ಶೇಕಡಾ 90 ರಷ್ಟು ಮತ್ತು ಡ್ರೋನ್ ದಾಳಿಗಳು ಶೇಕಡಾ 86 ರಷ್ಟು ಕಡಿಮೆಯಾಗಿದೆ ಎಂದು ಪೆಂಟಗನ್ ಹೇಳಿದೆ.
►ಇರಾನ್ ನ ಕ್ಷಿಪಣಿ ಶಸ್ತ್ರಾಗಾರ ಎಷ್ಟು ದೊಡ್ಡದು? ಅದರಲ್ಲಿ ಎಷ್ಟು ನಾಶವಾಗಿದೆ?
ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅತಿದೊಡ್ಡ ದಾಸ್ತಾನು ಹೊಂದಿದೆ ಎಂದು 2022ರಲ್ಲಿ ಯುಎಸ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ ಅಂದಾಜಿಸಿದೆ. ತನ್ನ ಬಳಿ ಎಷ್ಟು ಕ್ಷಿಪಣಿಗಳಿವೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಇಸ್ರೇಲಿ ಗುಪ್ತಚರ ವರದಿಗಳು ಅಲ್ಲಿ ಸುಮಾರು 3,000 ಕ್ಷಿಪಣಿಗಳಿವೆ ಎಂದು ಸೂಚಿಸುತ್ತವೆ. ಕಳೆದ ಜೂನ್ ನಲ್ಲಿ 12 ದಿನಗಳ ಯುದ್ಧದ ನಂತರ ಈ ಸಂಖ್ಯೆ 2,500ಕ್ಕೆ ಇಳಿದಿದೆ.
ಇರಾನ್ ನ ದಾಳಿ ಸಾಮರ್ಥ್ಯವನ್ನು ಕಡಿಮೆ ಮಾಡಲು ಅಮೆರಿಕ-ಇಸ್ರೇಲ್ ಒಕ್ಕೂಟವು 'ಲಾಂಚರ್ ಬೇಟೆ'ಗೆ ಆದ್ಯತೆ ನೀಡಿದೆ. ಪ್ರತಿ ಕ್ಷಿಪಣಿ ಉಡಾವಣೆಯು ದೊಡ್ಡ ಸ್ಫೋಟವನ್ನು ಉಂಟುಮಾಡುತ್ತದೆ, ಅದನ್ನು ಉಪಗ್ರಹ ಮತ್ತು ರಾಡಾರ್ ವ್ಯವಸ್ಥೆಗಳು ಪತ್ತೆಹಚ್ಚಬಹುದು.
ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ದಿ ವಾರ್ ಉಲ್ಲೇಖಿಸಿದ ಹಿರಿಯ ಇಸ್ರೇಲಿ ಮಿಲಿಟರಿ ಅಧಿಕಾರಿಯ ಪ್ರಕಾರ, ಇಸ್ರೇಲ್ ಅಂದಾಜು 410 ರಿಂದ 440 ಲಾಂಚರ್ ಗಳಲ್ಲಿ 290 ಲಾಂಚರ್ ಗಳನ್ನು ಸೇವೆಯಿಂದ ತೆಗೆದುಹಾಕಿದೆ.
ಆದರೆ ಇರಾನ್ ಒಂದು ವಿಶಾಲ ದೇಶವಾಗಿದ್ದು, ಅಮೆರಿಕ ಮತ್ತು ಇಸ್ರೇಲ್ ದೇಶದ ವಾಯುಪ್ರದೇಶದ ಮೇಲೆ ಬಹುತೇಕ ಸಂಪೂರ್ಣ ನಿಯಂತ್ರಣ ಹೊಂದಿದ್ದರೂ ಸಹ, ಇರಾನ್ ನ ಗುಂಡು ಹಾರಿಸುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಕಷ್ಟಕರವಾಗಿರುತ್ತದೆ ಎಂದು ವಾಷಿಂಗ್ಟನ್ ಡಿಸಿಯ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಡೇವಿಡ್ ಡೆಸ್ ರೋಚೆಸ್ ಹೇಳಿದ್ದಾರೆ.
ಲಾಂಚರ್ ಗಳನ್ನು ಗುರುತಿಸುವುದು ಸುಲಭವಲ್ಲ. ನಾವು ನೋಡುತ್ತಿರುವುದು ಯುದ್ಧದ ಮೊದಲು ಕಡಿಮೆ ವೀಕ್ಷಣೆ ಇದ್ದಾಗ ಗುಪ್ತ ಸ್ಥಳಗಳಲ್ಲಿ ಅಥವಾ ಮಿಲಿಟರಿಗೆ ಸಂಬಂಧವಿಲ್ಲದ ಸ್ಥಳಗಳಲ್ಲಿ ಇರಿಸಲಾದ ಕ್ಷಿಪಣಿಗಳಾಗಿವೆ ಎಂದು ಡೆಸ್ ರೋಚೆಸ್ Al jazeeraಗೆ ತಿಳಿಸಿದ್ದಾರೆ.
ಇರಾನ್ ಒಂದೇ ಬಾರಿ ದೊಡ್ಡ ಗುಂಪಿನಲ್ಲಿ ಕ್ಷಿಪಣಿಗಳನ್ನು ಹಾರಿಸಲು ಸಾಧ್ಯವಾಗದ ಕಾರಣ ಅದರ ಉಡಾವಣಾ ದರ ನಿಧಾನವಾಗಿದೆ ಎಂದು ಅವರು ಹೇಳಿದ್ದಾರೆ. ಇದರ ಪರಿಣಾಮವಾಗಿ, ಇರಾನ್ ಮಿಲಿಟರಿ ಗುರಿಗಳ ಬದಲು ನಾಗರಿಕ ಮತ್ತು ವಾಣಿಜ್ಯ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು, ವಿಶೇಷವಾಗಿ ಗಲ್ಫ್ ದೇಶಗಳಲ್ಲಿ, ಒಂದು ಸಮಯದಲ್ಲಿ ಒಂದು ಅಥವಾ ಎರಡು ಕ್ಷಿಪಣಿಗಳನ್ನು ಹಾರಿಸುತ್ತಿದೆ. ಇರಾನ್ ಈ ಪ್ರದೇಶದಲ್ಲಿ ಅಮೆರಿಕದ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ.
"ಮಿಲಿಟರಿ ದೃಷ್ಟಿಯಿಂದ (ಇರಾನ್ ನ ಕ್ರಮ) ಗಮನಾರ್ಹವಾಗಿಲ್ಲ. 'ಬೆದರಿಕೆ ಬೆಂಕಿ' ಎಂದು ಕರೆಯಲ್ಪಡುವ ಈ ತಂತ್ರವು ನಾಗರಿಕರ ಮೇಲೆ ಮಾನಸಿಕ ಒತ್ತಡವನ್ನು ಹೇರುವುದರ ಜೊತೆಗೆ, ನಿರಂತರ ಎಚ್ಚರಿಕೆಗಳ ಮೂಲಕ ನೆರೆಯ ರಾಷ್ಟ್ರಗಳ ರಕ್ಷಣಾತ್ಮಕ ಸನ್ನದ್ಧತೆಯನ್ನು ಕುಗ್ಗಿಸಲು ವಿನ್ಯಾಸಗೊಳಿಸಲಾಗಿದೆ," ಎಂದು ಡೆಸ್ ರೋಚೆಸ್ ಹೇಳಿದ್ದಾರೆ.
►ಇರಾನ್ ನ ಕಾರ್ಯತಂತ್ರವೇನು?
ಇರಾನ್ ನ ತಜ್ಞ ಮತ್ತು ಜರ್ಮನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಅಂಡ್ ಸೆಕ್ಯುರಿಟಿ ಅಫೇರ್ಸ್ (SWP) ನ ವಿಸಿಟಿಂಗ್ ಫೆಲೋ ಹಮೀದ್ರೇಜಾ ಅಜೀಜಿ ಅವರ ಪ್ರಕಾರ, ಇರಾನ್ ನ ಲೆಕ್ಕಾಚಾರ ಏನೆಂದರೆ, ತನ್ನ ಕ್ಷಿಪಣಿಗಳು ಮುಗಿಯುವ ಮೊದಲು ಗಲ್ಫ್ ಮತ್ತು ಇಸ್ರೇಲ್ ತಮ್ಮ ರಕ್ಷಣಾತ್ಮಕ ಸಾಮರ್ಥ್ಯಗಳನ್ನು ಕಳೆದುಕೊಳ್ಳಬಹುದು.
ಯುದ್ಧವನ್ನು ಉದ್ದೀರ್ಣಗೊಳಿಸುವ ಆಸಕ್ತಿಯೂ ಇರಬಹುದು ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿದಿನ ಇರಾನ್ನಿಂದ ಉಡಾಯಿಸಲಾಗುವ ಕಡಿಮೆ ಶಸ್ತ್ರಾಸ್ತ್ರಗಳ ಸಂಖ್ಯೆಯೇ ಸಾಕ್ಷಿ.
ಯುಎಸ್ ಮತ್ತು ಇಸ್ರೇಲ್ ಕೆಲವು ಲಾಂಚರ್ ಗಳು ಮತ್ತು ಪ್ರಮುಖ ಕ್ಷಿಪಣಿ ನೆಲೆಗಳನ್ನು ನಾಶಮಾಡುವಲ್ಲಿ ಯಶಸ್ವಿಯಾಗಿದ್ದರೂ, ಇರಾನಿಯರು ಕ್ಷಿಪಣಿ ಆಜ್ಞೆಯನ್ನು ವಿಕೇಂದ್ರೀಕರಿಸಿದ್ದಾರೆ. ಅವರು ಪತ್ತೆಹಚ್ಚಲು ಕಷ್ಟವಾದ ಮೊಬೈಲ್ ಲಾಂಚರ್ ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಅಜೀಜಿ ತಿಳಿಸಿದ್ದಾರೆ.
ಇದು ಸಮಯದ ವಿರುದ್ಧದ ಓಟ. ಆ ಓಟದಲ್ಲಿ ಇರಾನ್ ಗೆ ಅವಕಾಶವಿದೆ ಎಂದು ಅದು ನಂಬುತ್ತದೆ ಎಂದು ತಜ್ಞರು ಹೇಳುತ್ತಾರೆ.
"ನಿರಂತರ ಬೆದರಿಕೆಯಲ್ಲಿ ಪ್ರಮಾಣಕ್ಕಿಂತ ಪರಿಣಾಮ ಮುಖ್ಯ. ಯುದ್ಧದಲ್ಲಿ ತನ್ನ ಗುರಿಯನ್ನು ತಲುಪಲು ಕೇವಲ ಒಂದು ಡ್ರೋನ್ ಸಾಕು; ಉಳಿದವು ತಡೆಹಿಡಿಯಲ್ಪಟ್ಟಿದ್ದರೂ, ಅದು ರಾಷ್ಟ್ರದ ಭದ್ರತೆಯನ್ನು ಛಿದ್ರಗೊಳಿಸುತ್ತದೆ," ಎಂದು ದೋಹಾ ಇನ್ಸ್ಟಿಟ್ಯೂಟ್ ಫಾರ್ ಗ್ರಾಜುಯೇಟ್ ಸ್ಟಡೀಸ್ ನ ನಿರ್ಣಾಯಕ ಭದ್ರತಾ ಅಧ್ಯಯನಗಳ ಸಹಾಯಕ ಪ್ರಾಧ್ಯಾಪಕ ಮುಹನಾದ್ ಸೆಲೂಮ್ ಹೇಳಿದ್ದಾರೆ.
ಅಗ್ಗದ ಆದರೆ ಪರಿಣಾಮಕಾರಿ ಡ್ರೋನ್ ಗಳನ್ನು ಉತ್ಪಾದಿಸುವಲ್ಲಿ ಇರಾನ್ ಗೆ ಉತ್ತಮ ಅನುಭವವಿದೆ. ಶಹೆದ್-136 ಅನ್ನು ಸರಳ ಕಾರ್ಖಾನೆಗಳಲ್ಲಿ ತ್ವರಿತವಾಗಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಬಹುದು. ಅವುಗಳನ್ನು ಏಕಕಾಲದಲ್ಲಿ ಹಾರಿಸುವ ಮೂಲಕ ರಕ್ಷಣಾ ವ್ಯವಸ್ಥೆಯನ್ನು ಒತ್ತಡಕ್ಕೆ ಒಳಪಡಿಸಬಹುದು. ಇವುಗಳಿಗೆ ಸಂಕೀರ್ಣ ಲಾಂಚರ್ ಗಳ ಅಗತ್ಯವಿಲ್ಲ.
ಕೇವಲ 185 ಕಿ.ಮೀ./ಗಂ ವೇಗ ಹೊಂದಿದ್ದರೂ, ಶಹೆದ್ ಡ್ರೋನ್ ಗಳನ್ನು ಹೆಲಿಕಾಪ್ಟರ್ ಗಳಿಂದ ಹೊಡೆದುರುಳಿಸಬಹುದು. ಆದಾಗ್ಯೂ, ಇವುಗಳಲ್ಲಿ ಹಲವಾರು ಡ್ರೋನ್ ಗಳು ಯುಎಸ್ ಮತ್ತು ಗಲ್ಫ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ದಾಟುವಲ್ಲಿ ಯಶಸ್ವಿಯಾಗಿವೆ.
ಸೋಮವಾರ ಯುಎಇಯ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಹಾರಾಟಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ. ಮತ್ತೊಂದು ದಾಳಿಯಿಂದ ಫುಜೈರಾ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇರಾನ್ನಿಂದ ಹಾರಿಸಲಾದ ಕ್ಷಿಪಣಿಯಿಂದ ಮಧ್ಯ ಇಸ್ರೇಲ್ ನಲ್ಲಿ ವಾಯು ಸೈರನ್ ಗಳು ಮೊಳಗಿದವು.
ಜಾಗತಿಕ ಇಂಧನ ಪೂರೈಕೆಯ ಶೇಕಡಾ 20 ರಷ್ಟು ಸಾಗಿಸಲ್ಪಡುವ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಕೆಲವೇ ದಾಳಿಗಳು ನಡೆದಿದ್ದರೂ, ದಾಳಿಯ ಭಯದಿಂದ ನೂರಾರು ಹಡಗುಗಳು ನಿಷ್ಕ್ರಿಯವಾಗಿವೆ. ಯುದ್ಧ ಪ್ರಾರಂಭವಾದಾಗಿನಿಂದ ಹಡಗುಗಳಿಗೆ ಸಂಬಂಧಿಸಿದ 20 ಘಟನೆಗಳನ್ನು ಕಡಲ ಟ್ರ್ಯಾಕರ್ ವರದಿ ಮಾಡಿದೆ.
ತಜ್ಞರ ಪ್ರಕಾರ, ಇದು ಯುಎಸ್ ಮತ್ತು ಇಸ್ರೇಲ್ನಂತಹ ಬಲಾಢ್ಯ ಮಿಲಿಟರಿ ಶಕ್ತಿಗಳ ವಿರುದ್ಧ ಇರಾನ್ ಅನುಸರಿಸುವ ಅಸಾಂಪ್ರದಾಯಿಕ ರಕ್ಷಣಾತ್ಮಕ ಯುದ್ಧ ತಂತ್ರದ ಭಾಗವಾಗಿದೆ. ದುರ್ಬಲ ಪಕ್ಷವಾದ ಇರಾನ್ ಆರ್ಥಿಕ ಹೊಡೆತ ನೀಡಲು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಶತ್ರುಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ.
ಟೆಹ್ರಾನ್ ಈಗಾಗಲೇ ತೈಲದ ಬೆಲೆಯನ್ನು ಬ್ಯಾರೆಲ್ ಗೆ 100 ಡಾಲರ್ ಗಿಂತ ಹೆಚ್ಚಿಸಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಭೀತಿಯನ್ನು ಉಂಟುಮಾಡಿದೆ. ನೈಸರ್ಗಿಕ ಅನಿಲದ ಎರಡನೇ ಅತಿದೊಡ್ಡ ರಫ್ತುದಾರ ಖತರ್ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸುವುದನ್ನು ಮುಂದುವರೆಸಿದೆ. ಬಹರೇನ್ ನ ಸರ್ಕಾರಿ ತೈಲ ಕಂಪನಿ ತನ್ನ ಸಾಗಣೆಯ ಮೇಲೆ ಬಲವಂತದ ನಿರ್ಬಂಧವನ್ನು ಘೋಷಿಸಿದೆ. ಇದೇ ವೇಳೆ ಇರಾಕ್ನ ಪ್ರಮುಖ ದಕ್ಷಿಣ ತೈಲಕ್ಷೇತ್ರಗಳಲ್ಲಿ ಉತ್ಪಾದನೆ ಶೇಕಡಾ 70 ರಷ್ಟು ಕುಸಿದಿದೆ.
ಇರಾನ್ ಜಾಗತಿಕ ತೈಲ ಬೆಲೆಗಳನ್ನು ಹೆಚ್ಚಿಸುತ್ತಲೇ ಇದ್ದರೆ, "ಅದು ಅಮೆರಿಕಕ್ಕೆ ಇರಾನ್ ನಲ್ಲಿ ಅಮೆರಿಕದ ಬಾಂಬ್ಗಳಿಗಿಂತ ಸಮಾನ ಅಥವಾ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ," ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಾಲಿ ನಾಸ್ರ್ ಹೇಳಿದ್ದಾರೆ.

