ನವದೆಹಲಿ: 'ಮುಂದಿನ ವರ್ಷ ದೇಶದಲ್ಲಿ ಗಣತಿ ನಡೆಯಲಿದೆ. ಈ ಬಾರಿಯ ಗಣತಿಯು ಇದೇ ಮೊದಲ ಬಾರಿಗೆ ಡಿಜಿಟಲ್ ಸ್ವರೂಪದಲ್ಲಿ ನಡೆಸಲಾಗುತ್ತಿದೆ. ಈ ಕಾರಣದಿಂದಾಗಿ ಸೈಬರ್ ದಾಳಿಗಳು ನಡೆಯದಂತೆ ದತ್ತಾಂಶ ಸುರಕ್ಷತೆಗೆ ಒತ್ತು ನೀಡುತ್ತಿದ್ದೇವೆ' ಎಂದು ಕೇಂದ್ರ ಗೃಹ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದೆ.
'ಎಂಡ್ ಟು ಎಂಡ್ ಎನ್‌ಕ್ರಿಪ್ಷನ್, ಗಣತಿ ಮಾಡುವವರ ದೃಢೀಕರಣ ಸೇರಿದಂತೆ ದತ್ತಾಂಶ ಭದ್ರತೆಗಾಗಿ ವಿಶೇಷ ಸೈಬರ್ ತಂಡವೊಂದು ಹಲವು ಡಿಜಿಟಲ್ ಟೂಲ್‌ಗಳ ಮೂಲಕ 24 ಗಂಟೆಯು ನಿರಂತರವಾಗಿ ಗಣತಿಯ ದತ್ತಾಂಶಗಳ ಮೇಲೆ ನಿಗಾ ಇರಿಸಲಿದೆ' ಎಂದು ಸಚಿವಾಲಯ ಮಾಹಿತಿ ನೀಡಿದೆ.
'ಮೊಬೈಲ್ ಮತ್ತು ಪೋರ್ಟಲ್‌ಗಳ (ಜನರು ಸ್ವಯಂ ಆಗಿಯೂ ಮಾಹಿತಿಗಳನ್ನು ತುಂಬಬಹುದಾಗಿದೆ) ಮೂಲಕ ಸಂಗ್ರಹಿಸಲಾಗುವ ಗಣತಿ ದತ್ತಾಂಶಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಸ್ವರೂಪದಲ್ಲಿ ಇರಲಿವೆ. ಗಣತಿ ಮಾಡುವವರಿಗೆ ಪ್ರತ್ಯೇಕ ಐಡಿಗಳನ್ನು ನೀಡಲಾಗುತ್ತದೆ. ಇವರ ಲಾಗ್ ಇನ್‌ಗಾಗಿ ದೃಢೀಕರಣ ವ್ಯವಸ್ಥೆ ಇರಲಿದೆ' ಎಂದು ಮಾಹಿತಿ ನೀಡಿದೆ.

