ನವದೆಹಲಿ: 'ಹಿಂದಿ ಸೇರಿದಂತೆ ಯಾವುದೇ ಒಂದು ಭಾಷೆಯನ್ನು ಯಾವ ರಾಜ್ಯದ ಮೇಲೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಹೇರಿಕೆ ಮಾಡುವುದಿಲ್ಲ. ಬದಲಿಗೆ ಬಹುಭಾಷಾ ತತ್ತ್ವವನ್ನು ಎನ್‌ಇಪಿ ಉತ್ತೇಜಿಸುತ್ತಿದೆ' ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ ಚೌಧರಿ ಅವರು ಸೋಮವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಎನ್‌ಇಪಿಯಲ್ಲಿ ಪ್ರಸ್ತಾಪಿಸಲಾಗಿರವ ತ್ರಿಭಾಷಾ ವಿಚಾರವೂ ದ್ವಿಭಾಷಾ ಸೂತ್ರಕ್ಕೆ ಅನುಗುಣವಾಗಿಯೇ ಇದೆ. ಇಲ್ಲಿ ಯಾವ ಹೇರಿಕೆಯೂ ಇಲ್ಲ. ಇದರ ಸಂಪೂರ್ಣ ಅನುಷ್ಠಾನ ರಾಜ್ಯಗಳಿಗೆ ಬಿಟ್ಟ ವಿಚಾರ'ಎಂದಿದ್ದಾರೆ.
'ಜತೆಗೆ ಬಹುಭಾಷೆಗಳನ್ನು ಆರಂಭಿಕ ಹಂತದಿಂದಲೇ ಕಲಿತರೆ ಆಗುವ ಪ್ರಯೋಜನಗಳನ್ನು ಗಮನಿಸಿ, ಬಹುಭಾಷಾ ಕಲಿಕೆಗೆ ಎನ್‌ಇಪಿ ಒತ್ತು ನೀಡಿದೆ' ಎಂದೂ ಅವರು ಪ್ರತಿಪಾದಿಸಿದ್ದಾರೆ.
'ತಮಿಳುನಾಡು ಸರ್ಕಾರವು ಎನ್‌ಇಪಿಗೆ 2020ಕ್ಕೆ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದರೂ ಕೇಂದ್ರ ಸರ್ಕಾರವು ಸಮಗ್ರ ಶಿಕ್ಷಣ ಯೋಜನೆ ಅನ್ವಯ ರಾಜ್ಯಕ್ಕೆ ₹538 ಕೋಟಿಯನ್ನು ಬಿಡುಗಡೆ ಮಾಡಿದೆ ಎಂದೂ ಸಚಿವರು ಹೇಳಿದ್ದಾರೆ.

