ನವದೆಹಲಿ: ಬಿಡುಗಡೆಯಾದ ಅನುದಾನದ ಬಳಕೆ ಹಾಗೂ ಯೋಜನೆ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಆಗದಿರುವ ಕಾರಣ, ಇಸ್ರೊದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮಗಳು ನಿಗದಿತ ಕಾಲಮಿತಿಯಲ್ಲಿ ಕೈಗೂಡುವುದಿಲ್ಲ ಎಂದು ಸಂಸದೀಯ ಸಮಿತಿಯೊಂದು ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
'ಯೋಜನೆ ಅನುಷ್ಠಾನದಲ್ಲಿನ ಈ ವಿಳಂಬದಿಂದಾಗಿ ಉದ್ದೇಶಿತ ಬಾಹ್ಯಾಕಾಶ ಕಾರ್ಯಕ್ರಮಗಳು ಇಸ್ರೊಗೆ ಸವಾಲುಗಳಾಗಿ ಪರಿಣಮಿಸುವ ಸಾಧ್ಯತೆ ಇದೆ' ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
ಚಂದ್ರಯಾನ-4, ಚಂದ್ರಯಾನ-5 ಹಾಗೂ ಶುಕ್ರ ಗ್ರಹ ಕಕ್ಷೆಗಾಮಿ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಬಿಡುಗಡೆಯಾದ ಅನುದಾನ, ಈ ವರೆಗೆ ಆಗಿರುವ ವೆಚ್ಚ, ಯೋಜನೆಗಾಗಿ ಸಾಧನಗಳ ಖರೀದಿ ಕುರಿತಂತೆ ಬಾಹ್ಯಾಕಾಶ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ, ಸಮಿತಿ ಈ ವರದಿ ಸಿದ್ಧಪಡಿಸಿದೆ.
ಈ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಬಳಸುವ ಗಗನನೌಕೆಯ ವಿನ್ಯಾಸದಲ್ಲಿ ಮಾಡಿರುವ ಬದಲಾವಣೆಗಳು, ಕಚ್ಚಾ ವಸ್ತುಗಳ ಖರೀದಿ ಮುಂದೂಡಿರುವುದು ಸೇರಿ ವಿವಿಧ ಕಾರಣಗಳಿಂದಾಗಿ ಅನುದಾನ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2027ರ ಅಕ್ಟೋಬರ್‌ನಲ್ಲಿ ಕಾರ್ಯಗತಗೊಳಿಸುವ ಉದ್ದೇಶದ ಚಂದ್ರಯಾನ-4, ₹2,104 ಕೋಟಿ ವೆಚ್ಚದ ಯೋಜನೆ. 2025-26ನೇ ಸಾಲಿನ ಬಜೆಟ್‌ನಲ್ಲಿ ₹129 ಕೋಟಿ ಹಂಚಿಕೆಯಾಗಿತ್ತು. ಈ ಪೈಕಿ ಜನವರಿ 31ರ ವರೆಗೆ ಇಸ್ರೊ ₹34 ಕೋಟಿ ಮಾತ್ರ ಖರ್ಚು ಮಾಡಿದೆ.
₹982 ಕೋಟಿ ವೆಚ್ಚದ ಚಂದ್ರಯಾನ-5 ಯೋಜನೆ ಪೈಕಿ ₹58 ಲಕ್ಷ, ₹29.5 ಕೋಟಿ ವೆಚ್ಚದ ಶುಕ್ರ ಗ್ರಹ ಕಾರ್ಯಕ್ರಮದಡಿ ₹5.12 ಕೋಟಿ ಖರ್ಚು ಮಾಡಿದೆ.

