ಕೋಲ್ಕತ್ತ: 'ಚುನಾವಣಾ ಆಯೋಗವು ನಡೆಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ, ಪಟ್ಟಿಯಿಂದ ಮತದಾರರ ಹೆಸರುಗಳನ್ನು ಮನಬಂದಂತೆ ತೆಗೆಯಲಾಗಿದೆ' ಎಂದು ಆರೋಪಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರದಿಂದ ಧರಣಿ ನಡೆಸಿದರು.
ಇದರಿಂದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಚುನಾವಣಾ ಆಯೋಗದ (ಇ.ಸಿ) ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
ಕೋಲ್ಕತ್ತದ ಎಸ್‌ಪ್ಲೇನೇಡ್ ಮೆಟ್ರೊ ಚಾನೆಲ್‌ನಲ್ಲಿ ಧರಣಿ ಆರಂಭಿಸಿದ ಮಮತಾ ಬ್ಯಾನರ್ಜಿ, 'ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲು ಬಿಜೆಪಿ ಮತ್ತು ಚುನಾವಣಾ ಆಯೋಗ ಪಿತೂರಿ ನಡೆಸುತ್ತಿವೆ. ಇವರ ಮುಖವಾಡ ಕಳಚುತ್ತೇನೆ' ಎಂದು ಪ್ರತಿಜ್ಞೆ ಮಾಡಿದರು.
'ಹಲವು ಮತದಾರರು ಮೃತಪಟ್ಟಿರುವುದಾಗಿ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ತಪ್ಪಾಗಿ ನಮೂದಿಸಲಾಗಿದೆ. ಚುನಾವಣಾ ಆಯೋಗವು ಯಾರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದೆಯೋ, ಅಂತಹ ಮತದಾರರನ್ನು ನಾನು ಈ ಪ್ರತಿಭಟನಾ ಸ್ಥಳಕ್ಕೆ ಕರೆತಂದು ಹಾಜರುಪಡಿಸುತ್ತೇನೆ' ಎಂದು ಬ್ಯಾನರ್ಜಿ ಹೇಳಿದರು.
ಫೆಬ್ರುವರಿ 28ರಂದು ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ, ಕಳೆದ ವರ್ಷ ನವೆಂಬರ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ, ಸುಮಾರು 63.66 ಲಕ್ಷ ಹೆಸರುಗಳನ್ನು (ಒಟ್ಟು ಮತದಾರರ ಶೇ 8.3ರಷ್ಟು) ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಿಂದಾಗಿ ಮತದಾರರ ಸಂಖ್ಯೆಯು ಸುಮಾರು 7.66 ಕೋಟಿಯಿಂದ 7.04 ಕೋಟಿಗೆ ಇಳಿಕೆಯಾಗಿದೆ.
60.06 ಲಕ್ಷಕ್ಕೂ ಹೆಚ್ಚು ಮತದಾರರನ್ನು 'ವಿಚಾರಣಾ ಹಂತದಲ್ಲಿದೆ' ಎಂಬ ವರ್ಗದಲ್ಲಿ ಇರಿಸಲಾಗಿದೆ. ಇದರರ್ಥ, ಮುಂಬರುವ ವಾರಗಳಲ್ಲಿ ಅವರ ಅರ್ಹತೆಯನ್ನು ಕಾನೂನು ಪರಿಶೀಲನೆಯ ಮೂಲಕ ನಿರ್ಧರಿಸಲಾಗುತ್ತದೆ. ಈ ಪ್ರಕ್ರಿಯೆಯು ಕ್ಷೇತ್ರ ಮಟ್ಟದ ಚುನಾವಣಾ ಸಮೀಕರಣಗಳನ್ನು ಮತ್ತಷ್ಟು ಬದಲಾಯಿಸುವ ಸಾಧ್ಯತೆಯಿದೆ.

