HEALTH TIPS

ರಸಗೊಬ್ಬರ ಕೊರತೆ ಸಾಧ್ಯತೆ; ಭಾರತದ ಕೃಷಿ ವಲಯಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷದ ಬಿಸಿ!

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಭೌಗೋಳಿಕ- ರಾಜಕೀಯ ಉದ್ವಿಗ್ನತೆಗಳು ಹಾಗೂ ಯುದ್ಧದ ಪರಿಣಾಮವಾಗಿ ರಸಗೊಬ್ಬರಗಳ ಅಲಭ್ಯತೆಯಿಂದ ಭಾರತದ ಒಟ್ಟು ಕೃಷಿ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಲಿದೆ.

ರಸಗೊಬ್ಬರಗಳು ಬೆಳೆಗಳಿಗೆ ಆಹಾರ. ಅವು ಹಣ್ಣು ಮತ್ತು ತರಕಾರಿಗಳಿಗೆ ಅಗತ್ಯ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಶಿಯಂ, ಗಂಧಕ ಮೊದಲಾದವುಗಳನ್ನು ನೀಡುತ್ತವೆ.

ತೈಲ ಬೀಜಗಳು ಮತ್ತು ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಬಹಳಷ್ಟು ಆಹಾರ ಮತ್ತು ಆಹಾರೇತರ ಬೆಳೆಗಳಲ್ಲಿ ಭಾರತ ಸ್ವಾವಲಂಬಿಯಾಗಿದೆ. ಆದರೆ ರಸಗೊಬ್ಬರಗಳ ವಿಚಾರಕ್ಕೆ ಬಂದಾಗ ಹಿಂದೆ ಬಿದ್ದಿದೆ.

ಭಾರತದ ಆಹಾರ ಭದ್ರತೆಯು ರಸಗೊಬ್ಬರಗಳ ಆಮದುಗಳೊಂದಿಗೆ ನಿಕಟವಾದ ಸಂಬಂಧ ಹೊಂದಿದೆ. ವಿಶೇಷವಾಗಿ ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುವ ರಸಗೊಬ್ಬರಗಳ ಅಗತ್ಯ ಕೃಷಿ ಕ್ಷೇತ್ರಕ್ಕೆ ತೀವ್ರವಾಗಿದೆ. ಪ್ರಸ್ತುತ ದಾಸ್ತಾನು ಪ್ರಮಾಣ ತಾತ್ಕಾಲಿಕವಾಗಿ ಸಾಕಷ್ಟಿದ್ದರೂ, ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಭೌಗೋಳಿಕ- ರಾಜಕೀಯ ಉದ್ವಿಗ್ನತೆಗಳು ಹಾಗೂ ಯುದ್ಧದ ಪರಿಣಾಮವಾಗಿ ರಸಗೊಬ್ಬರಗಳ ಅಲಭ್ಯತೆಯಿಂದ ಭಾರತದ ಒಟ್ಟು ಕೃಷಿ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಲಿದೆ.

ರಸಗೊಬ್ಬರಗಳ ಅವಲಂಬನೆ

ಭಾರತವು ಆಹಾರ ಉತ್ಪಾದನೆಯಲ್ಲಿ ಹೆಚ್ಚಾಗಿ ಸ್ವಾವಲಂಬಿಯಾಗಿದೆ. ಆದರೆ ರಸಗೊಬ್ಬರಗಳ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. 2025-26ರಲ್ಲಿ ದೇಶವು ಸುಮಾರು 10 ದಶಲಕ್ಷ ಟನ್ಗಳಷ್ಟು ಯೂರಿಯ ಮತ್ತು 6.4 ದಶಲಕ್ಷ ಟನ್ಗಳಷ್ಟು ಡೈ-ಅಮೋನಿಯಂ ಫಾಸ್ಪೇಟ್ (DAP), ಮತ್ತು ಅಗತ್ಯವಿರುವ ಸಂಪೂರ್ಣ 3 ದಶಲಕ್ಷ ಟನ್ಗಳಷ್ಟು ಮ್ಯೂರಿಯೇಟ್ ಆಫ್ ಪೊಟ್ಯಾಶ್ (MOP) ಅನ್ನು ಆಮದು ಮಾಡಿಕೊಂಡಿದೆ.

ಪರಿಣಾಮ ಬೀರಲಿರುವ ಯುದ್ಧದ ಅಂಶ

ಭಾರತದ ರಸಗೊಬ್ಬರ ಪೂರೈಕೆ ಸರಪಳಿಯಲ್ಲಿ ಪಶ್ಚಿಮ ಏಷ್ಯಾ ಪ್ರಮುಖ ಪಾತ್ರ ವಹಿಸುತ್ತದೆ. ಗಲ್ಫ್ ಸಹಕಾರಿ ಮಂಡಳಿ ದೇಶಗಳಾದ ಒಮಾನ್, ಖತರ್, ಸೌದಿ ಅರೇಬಿಯ, ಯುಎಇ ಮತ್ತು ಬಹರೈನ್ ಒಟ್ಟು ಶೇ 75ರಷ್ಟು ಭಾರತದ ಯೂರಿಯ ಆಮದನ್ನು ನೀಡುತ್ತವೆ. ಸೌದಿ ಅರೇಬಿಯಾದಿಂದ ಅತ್ಯಧಿಕ ಪ್ರಮಾಣದಲ್ಲಿ DAP ಆಮದು ಮಾಡಿಕೊಳ್ಳಲಾಗುತ್ತಿದೆ. ಅದೇ ಸಮಯದಲ್ಲಿ ಜೋರ್ಡನ್ ಮತ್ತು ಇಸ್ರೇಲ್ ನಿಂದ MOP ಮತ್ತು ಫಾಸ್ಪಾರಿಕ್ ಆಮ್ಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಪ್ರದೇಶದಲ್ಲಿ ಸಂಘರ್ಷದ ಪರಿಣಾಮದ ಜೊತೆಗೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತು ಚೀನಾ ಜೊತೆಗೆ ಸಂಬಂಧ ಹದಗೆಟ್ಟಿರುವುದರಿಂದ ಭಾರತದ ಕೃಷಿ ಕ್ಷೇತ್ರ ಅಪಾಯವನ್ನು ಎದುರಿಸುತ್ತಿದೆ.

ಭಾರತದ ಆಮದು ಅವಲಂಬನೆ

ಭಾರತದ ರಸಗೊಬ್ಬರಗಳು ಆಮದು ಮಾಡಿಕೊಂಡಿರುವ ನೈಸರ್ಗಿಕ ಅನಿಲವನ್ನು ಹೆಚ್ಚಾಗಿ ಅವಲಂಬಿಸಿವೆ. ಕೃಷಿ ವಲಯವು ಭಾರತದ ಒಟ್ಟು ನೈಸರ್ಗಿಕ ಅನಿಲದ ಸುಮಾರು ಶೇ 29ರಷ್ಟನ್ನು ಬಳಸುತ್ತದೆ. ಹೆಚ್ಚುವರಿಯಾಗಿ ಭಾರತದಲ್ಲಿ ರಾಕ್ ಫಾಸ್ಪೇಟ್, ಪೊಟ್ಯಾಶ್ ಮತ್ತು ಸಲ್ಫರ್ ನಿಕ್ಷೇಪಗಳ ಕೊರತೆಯಿದ್ದು, ಆಮದುಗಳನ್ನು ಅನಿವಾರ್ಯವಾಗಿಸುತ್ತದೆ. ಉದಾಹರಣೆಗೆ 2024-25ರಲ್ಲಿ ಭಾರತವು 2.5 ದಶಲಕ್ಷ ಟನ್ ಅಮೋನಿಯವನ್ನು ಸೌದಿ ಮತ್ತು ಒಮಾನ್ ನಿಂದ ಆಮದು ಮಾಡಿಕೊಂಡಿದೆ.

ವೆಚ್ಚಗಳ ಏರಿಕೆ ಮತ್ತು ಪೂರೈಕೆ ಅಡಚಣೆ

ರಷ್ಯಾದಿಂದ ಅಮೋನಿಯ ಮತ್ತು ಸಲ್ಫರ್ ರಫ್ತು ಮೇಲೆ ಯುದ್ಧದ ಪರಿಣಾಮವಾಗಿದೆ. ಯುದ್ಧದಿಂದಾಗಿ ಕೊಳವೆ ಮಾರ್ಗಗಳು ನಷ್ಟಗೊಂಡಿವೆ ಮತ್ತು ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿಗಳಾಗಿವೆ. ಪರಿಣಾಮವಾಗಿ ಭಾರತದಲ್ಲಿ ಸಲ್ಫರ್ ಬೆಲೆಗಳು ಪ್ರತಿ ಟನ್ಗೆ 250 ರೂ.ನಿಂದ 550 ರೂ.ಗೆ ಏರಿದೆ. ಇಂತಹ ಚಂಚಲತೆ ಭಾರತದ ರಸಗೊಬ್ಬರ ಪೂರೈಕೆ ಸರಪಳಿಯ ದೌರ್ಬಲ್ಯವನ್ನು ಒತ್ತಿ ಹೇಳುತ್ತದೆ.

ಪ್ರಸ್ತುತ ದಾಸ್ತಾನು ವಿವರ

ಈ ಸವಾಲುಗಳ ಹೊರತಾಗಿಯೂ ಭಾರತದ ರಸಗೊಬ್ಬರ ದಾಸ್ತಾನುಗಳು ಪ್ರಸ್ತುತ ಹೆಚ್ಚು ಸಮಸ್ಯೆ ಎದುರಿಸಿಲ್ಲ. 2026 ಫೆಬ್ರವರಿಯಲ್ಲಿ ಯೂರಿಯ ದಾಸ್ತಾನು 5.5 ದಶಲಕ್ಷ ಟನ್ ಗಳಷ್ಟಿವೆ. ಹಿಂದಿನ ವರ್ಷದಲ್ಲಿ 4.9 ದಶಲಕ್ಷ ಟನ್ ಗಳಷ್ಟು ದಾಸ್ತಾನು ಇತ್ತು. DAP ಮತ್ತು ಇತರ ಸಂಕೀರ್ಣ ಗೊಬ್ಬರಗಳ ದಾಸ್ತಾನು ಕೂಡ ಸುಧಾರಿಸಿವೆ. ಇಂಡೋನೇಷ್ಯ, ಮಲೇಷ್ಯ, ಈಜಿಪ್ಟ್ ಮತ್ತು ಆಸ್ಟ್ರೇಲಿಯಗಳಿಂದ ಹೆಚ್ಚುವರಿ ಆಮದು ಪರಿಣಾಮವಾಗಿ ಈ ಹೆಚ್ಚಳವನ್ನು ಸಾಧಿಸಲಾಗಿದೆ.

ಅನಿಶ್ಚಿತತೆ ನಡುವೆ ಸರ್ಕಾರದ ದ್ವಂದ್ವ ಸ್ಥಿತಿ

ಯುದ್ಧ ಮುಂದುವರಿದರೆ ದಾಸ್ತಾನು ಸಾಕಾಗುವುದಿಲ್ಲ. ಸಾಕಷ್ಟು ಅನಿಲ ಲಭ್ಯವಿಲ್ಲದೆ ಅನೇಕ ಯೂರಿಯ ಘಟಕಗಳು ಶೇ 60ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದರಿಂದ ಎಲ್‌ಎನ್ಜಿ, ಅಮೋನಿಯ ಮತ್ತು ಸಲ್ಫರ್ ಪೂರೈಕೆಗೆ ತೀವ್ರ ಅಡ್ಡಿಯಾಗಬಹುದು. ಹೀಗಾಗಿ ಭಾರತವು ಅಮೆರಿಕ, ಆಸ್ಟ್ರೇಲಿಯ ಮತ್ತು ಇಂಡೋನೇಷ್ಯಗಳಿಂದ ಆಮದು ಮಾಡಿಕೊಳ್ಳುವ ಒತ್ತಡಕ್ಕೆ ಬೀಳಬಹುದು.

ರಸಗೊಬ್ಬರಗಳು ನೈಸರ್ಗಿಕ ಅನಿಲದ ಬಹುಪಾಲನ್ನು ಬಳಸುವುದರಿಂದ, ಆಹಾರ ಭದ್ರತೆ ಕಾಪಾಡಲು ಮತ್ತು ನಿರಂತರ ಅಡುಗೆ ಇಂಧನ ಪೂರೈಕೆ ಖಚಿತಪಡಿಸಿಕೊಳ್ಳಲು ಸರ್ಕಾರವು ರಸಗೊಬ್ಬರಗಳು ಮತ್ತು ನಗರ ಅನಿಲ ವಿತರಣೆಗೆ ಆದ್ಯತೆ ನೀಡಬೇಕಾಗಬಹುದು.

ಪಶ್ಚಿಮ ಏಷ್ಯಾದ ಮೇಲೆ ರಸಗೊಬ್ಬರ ಅವಲಂಬನೆಯು ಭಾರತದ ಕೃಷಿ ವಲಯವನ್ನು ಭೌಗೋಳಿಕ ರಾಜಕೀಯ ಆಘಾತಗಳಿಗೆ ಹೆಚ್ಚು ಗುರಿಯಾಗಿಸುತ್ತದೆ. ಪ್ರಸ್ತುತ ದಾಸ್ತಾನುಗಳು ಅಲ್ಪಾವಧಿಗೆ ನೆಮ್ಮದಿ ಒದಗಿಸಬಹುದು. ಆದರ ಉದ್ವಿಗ್ನತೆ ದೀರ್ಘಕಾಲ ಮುಂದುವರಿದಿರೆ ಪೂರೈಕೆಯನ್ನು ಕಡಿಮೆಯಾಗಬಹುದು, ವೆಚ್ಚಗಳು ಹೆಚ್ಚಾಗಬಹುದು ಮತ್ತು ಭಾರತವು ತನ್ನ ಆಮದನ್ನು ವೈವಿಧ್ಯಮಯಗೊಳಿಸುವ ಒತ್ತಡ ಬೀಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries