ಕೋಝಿಕ್ಕೋಡ್: ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಪಿ. ಉಣ್ಣಿಕೃಷ್ಣನ್ ಅವರು ಮಂಗಳವಾರ ಕೋಝಿಕ್ಕೋಡ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಉಣ್ಣಿಕೃಷ್ಣನ್ ಅವರು ಸುಮಾರು ಮೂರು ದಶಕಗಳ ಕಾಲ ವಡಕ್ಕರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಸುದೀರ್ಘ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಅವರು ಅನುಭವಿ ಸಂಸದೀಯ ಪಟು ಎಂಬ ವ್ಯಾಪಕ ಮನ್ನಣೆಗೆ ಪಾತ್ರರಾಗಿದ್ದರು.
ಕೆ.ಪಿ.ಉನ್ನಿಕೃಷ್ಣನ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಕೆ.ಪಿ.ಉಣ್ಣಿಕೃಷ್ಣನ್ ಅವರು ಕೇರಳ ರಾಜಕಾರಣದಲ್ಲಿ ಹಲವಾರು ವರ್ಷಗಳ ಕಾಲ ಪ್ರಭಾವಿ ವ್ಯಕ್ತಿ ಎನ್ನಿಸಿಕೊಂಡಿದ್ದರು.

